Sunday, May 25, 2014

ಎಲ್ಲೋ ಜೋಗಪ್ಪ ನಿನ್ನರಮನೆ...ಜೋಗಿ ಸಂಭ್ರಮ

ನಿನ್ನ ಮನದಲ್ಲೇ ನನ್ನರಮನೆ ಎಂದು ಸಾರಿ ಹೋದ ಜೋಗಿ...!!

ಹೌದು..ನಿನ್ನೆ ನಡೆದ ಜೋಗಿ ಆಟ ಪ್ರೇಕ್ಷಕರ ಮನಸೂರೆಗೊಂಡಿತು! ಮಲೆನಾಡಿನ ಈ ವಿಶಿಷ್ಟ ಕಲೆ ಬೆಂಗಳೂರಿಗರನ್ನು ಆಕರ್ಷಿಸಿತು. ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ||, ಶಿವಮೊಗ್ಗ ಜಿಲ್ಲೆಯ ಕೆ. ಗುಡ್ಡಪ್ಪ ಜೋಗಿ, ನಾಗರಾಜ ಜೋಗಿ ಮತ್ತು ತಂಡದವರು "ವೀರಸೇನ ಕೋಕಿಲೆ" ಅರ್ಥಾತ್ "ವಸನಶೀಲ ಕುಸುಮಮ೦ಜರಿ" ಎ೦ಬ ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಉತ್ತಮವಾಗಿ ಹಾಡಿದರು.

ರಸವತ್ತಾದ ಲಾವಣಿಗಳು, ಪದ್ಯಗಳು, ಹಾಡುಗಳ ಕಟ್ಟಿ; ಮುಖ್ಯ ಕಥಾಭಾಗದ ನಡುವೆ ಸಣ್ಣ ಸಣ್ಣ ಉಪಕಥೆಗಳ ಪೋಣಿಸಿ ಹೇಳುವ ಪರಿ ಅತ್ಯುತ್ತಮವಾಗಿತ್ತು. ಅತ್ತೆ-ಸೊಸೆಯಂದಿರ ಬಾಂಧವ್ಯ, ಹಿಂದಿನ ದಿನಗಳು & ಇಂದಿನ ದಿನಗಳ ಬದಲಾವಣೆ, ವರದಕ್ಷಿಣೆಯ ಬಗ್ಗೆ, ತಾಯಿಯ ಬಗ್ಗೆ, ತಾಯಿ-ಮಗಳ ಮಮತೆಯ ತುಡಿತದ ಬಗೆಗಿನ ಸುಂದರವಾದ & ಹಾಸ್ಯಪೂರ್ವಕ ಲಾವಣಿಗಳನ್ನು ಪ್ರಸ್ತುತಪಡಿಸಿದರು.

ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಜರಿದ್ದು, ಕಾರ್ಯಕ್ರಮದ ಕೊನೆತನಕ ಜೋಗಿ ಸಂಭ್ರಮದಲ್ಲಿ ಭಾಗಿಯಾಗಿ & ಅವಿರತದ ಕಾರ್ಯಗಳಿಗೆ ಬೆನ್ನು ತಟ್ಟಿದರು.

ಅವಿರತದ ಈ ವಿಶೇಷ ಪ್ರಯೋಗ ಜನರ ಮೆಚ್ಚುಗೆಗೆ ಭಾಜನವಾಯಿತು. ಕಾರ್ಯಕ್ರಮಕ್ಕೆ ಸಹಕಾರಿಯಾದ ಎಲ್ಲ ಮಿತ್ರರಿಗೂ ಹಾಗು ತಾಳ್ಮೆಯಿಂದ ಕಥೆಯನ್ನು ಸವಿದ ಪ್ರೇಕ್ಷಕರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.

ಮತ್ತೆ-ಮತ್ತೆ ಉತ್ತೇಜನದ ನಿರೀಕ್ಷೆಯಲ್ಲಿ...

ಅವಿರತ ತಂಡ.


 




 
 


 

Thursday, May 22, 2014

"ಅವಿರತದಿಂದ ಮತ್ತೊಂದು ಅಪರೂಪದ ಪ್ರಯತ್ನ "

ನಿಮಗೆ ನೆನಪಿದೆಯಾ? ನಾವು ಸಣ್ಣವರಿದ್ದಾಗ ನಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮ ನಮಗೆ ಕತೆ-ಹಾಡು ಹೇಳುವಾಗ ನಾವು ಮೂಗು,ಬಾಯಿ, ಕಣ್ಣರಳಿಸಿಕೊಂಡು ಕೇಳುತ್ತಿದ್ದ ಆ ದಿನಗಳು...ಆ ಕತೆಗಳು ನಮ್ಮ ಕಲ್ಪನಾಲೋಕವನ್ನು ಎಷ್ಟು ವಿಸ್ತಾರ ಮಾಡ್ತಾ ಇದ್ವು ಅಲ್ವಾ? ಆದರೆ ಈಗ ನಮ್ಮ ಮಕ್ಕಳಿಗೆ ಕತೆ-ಹಾಡು ಹೇಳುವಷ್ಟು ಸಮಯ ನಮಗಿದೆಯೇ? ಈ ಬೆಂಗಳೂರಿನ ಜೀವನದ ಜಂಜಾಟದಲ್ಲಿ ಮಕ್ಕಳಿಗೆ ಕತೆ ಹೇಳುವ ಇಷ್ಟವಿದ್ದರೂ ಸಮಯ ಹೊಂದಿಸೋದು ಕಷ್ಟ ಕಷ್ಟ ! ! ಬೇಸರ ಮಾಡಿಕೊಳ್ಳಬೇಡಿ ನಮ್ಮ ಬೆಂಗಳೂರಿನವರಿಗಾಗಿಯೇ ಹಾಡು-ಕತೆಗಳನ್ನು ಹೇಳಿ ರಂಜಿಸಲು ನಾವು ಮಲೆನಾಡಿನಿಂದ ಕತೆಗಾರರನ್ನು ಕರೆಸುತ್ತಿದ್ದೇವೆ. ಗುಡ್ಡಪ್ಪ ಜೋಗಿಗಳ ಜೋಳಿಗೆಯಲ್ಲಿ ಅದೆಂತಹ ಅದ್ಭುತ ಕತೆಗಳು-ಹಾಡುಗಳು ಅಡಗಿ ಕುಳಿತಿದ್ದಾವೋ ಏನೋ?

ಬನ್ನಿ ಆ ಕತೆ - ಹಾಡುಗಳನ್ನು "ಎಲ್ಲೋ ಜೋಗಪ್ಪ ನಿನ್ನರಮನೆ" ಕಾರ್ಯಕ್ರಮದಲ್ಲಿ ಒಟ್ಟಿಗೆ ಕುಳಿತು ಕೇಳಿ ಖುಷಿಪಡೋಣ.

ಇದೇ ಭಾನುವಾರ ಅಂದರೆ ಮೇ 25ನೇ ತಾರೀಖು ಸಂಜೆ 4.00 ಕ್ಕೆ
ಸ್ಥಳ : ಗ್ರಂಥಾಂಗಣ, ಕೇಂದ್ರೀಯ ಗ್ರಂಥಾಲಯ, ಹಂಪಿನಗರ (ಆರ್.ಪಿ.ಸಿ ಲೇಔಟ್), ವಿಜಯನಗರ ಬೆಂಗಳೂರು

ದಯವಿಟ್ಟು ಮನೆ ಮಂದಿಯೆಲ್ಲಾ ಬಂದು ಒಂದು ಅಪರೂಪದ ಜೋಗಿಯಾಟಕ್ಕೆ ಜೊತೆಯಾಗಿ.

ಬರ್ತೀರಾ ಅಲ್ವಾ? ಕಾಯ್ತಾ ಇರ್ತೀವಿ.....

Sunday, May 18, 2014

ಎಲ್ಲೋ ಜೋಗಪ್ಪ ನಿನ್ನರಮನೆ-Facebook Event Invitation

https://www.facebook.com/events/443827075761506/?notif_t=plan_user_invited

ಎಲ್ಲೋ ಜೋಗಪ್ಪ ನಿನ್ನರಮನೆ?

"ಅವಿರತ ಪ್ರತಿಷ್ಠಾನ ಅರ್ಪಿಸುವ" ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ||, ಶಿವಮೊಗ್ಗ ಜಿಲ್ಲೆಯ ಕೆ. ಗುಡ್ಡಪ್ಪ ಜೋಗಿ, ನಾಗರಾಜ ಜೋಗಿ ಮತ್ತು ತ೦ಡದವರಿ೦ದ "ವೀರಸೇನ ಕೋಕಿಲೆ" ಅರ್ಥಾತ್ "ವಸನಶೀಲ ಕುಸುಮಮ೦ಜರಿ" ಎ೦ಬ ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಹಾಡಲಿದ್ದಾರೆ... ಮಲೆನಾಡಿನ ಅತ್ಯ೦ತ ವಿಶಿಷ್ಟವಾದ ಹಾಗು ಪುರಾತನವಾದ ಜಾನಪದ ಪ್ರಾಕಾರಗಳಲ್ಲಿ ಒ೦ದಾದ "ಜೋಗಿ ಆಟ"ವು, ಇ೦ದಿಗೂ ಸಹ ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಧಾರವಾಡ ಮು೦ತಾದ ಕಡೆಗಳಲ್ಲಿ ಅತ್ಯ೦ತ ಜೀವ೦ತವಾಗಿದೆ. ಪುರಾಣದನ್ವಯ ಈ ಜೋಗಿ ಆಟವು ಮಹಾಭಾರತದ ಕಾಲಮಿತಿಗೆ ಒಳಪಡುತ್ತದೆ. ಪಾ೦ಡವರು ೧೧ ವರುಷಗಳ ಕಾಲ ವನವಾಸವ ಮುಗಿಸಿರಲು, ಅರ್ಜುನನಿಗೆ ತಾಯಿ ಕು೦ತಿಯನ್ನು ನೋಡಲೇಬೇಕೆ೦ಬ ಆಸೆಯಾಗುತ್ತದೆ. ಈ ಬಗ್ಗೆ ಕಾಡಿನಲ್ಲಿದ್ದ ಋಷಿಗಳಾದ ಭಾರಾಪ೦ತ ಜಗದ್ಗುರುಗಳಲ್ಲಿ ಕೇಳಲು; ತಮ್ಮನ್ನು ಕಾಡುತ್ತಿದ್ದ ಹಾಗು ತಮ್ಮ ಹೋಮ-ಹವನಗಳಿಗೆ ಅಡ್ಡಿಪಡಿಸುತ್ತಿದ್ದ ಕಿನ್ನರಿ ಎ೦ಬ ರಾಕ್ಷಸಿಯನ್ನು ಸ೦ಹರಿಸುವುದಾದರೆ, ಯಾರಿಗೂ ತಿಳಿಯದ೦ತೆ ಅಜ್ಞಾತವಾಗಿ ತಾಯಿಯನ್ನು ಕಾಣುವ ಉಪಾಯವನ್ನು ತಿಳಿಸುವುದಾಗಿ ಹೇಳುತ್ತಾರೆ. ಅರ್ಜುನನು ಆಕೆಯನ್ನು ಸ೦ಹರಿಸಿದ ನ೦ತರ; ಆ ರಾಕ್ಷಸಿಯ ನರಗಳನ್ನೇ ತ೦ತಿಗಳನ್ನಾಗಿ ಮಾಡಿ, ಕುಜಗಳು ಮತ್ತು ಬೆನ್ನೆಲುಬಿನಿ೦ದ ಕಿನ್ನೂರಿಯನ್ನು ಹಾಗು ಆಕೆಯ ಚರ್ಮದಿ೦ದ ಜೋಳಿಗೆಯೊ೦ದನ್ನು ಸಿದ್ದಪಡಿಸಿ, ಅರ್ಜುನನಿಗೆ ಹೀಗೆ ಜೋಗಿಯ ರೂಪವನ್ನು ನೀಡಿ, ಈ ವೇಷದಲ್ಲಿ ಮಿಕ್ಕ ವನವಾಸವನ್ನು ಪೂರ್ಣಗೊಳಿಸಲು ಹೇಳಿ ಕಳುಹಿಸುತ್ತಾರೆ. ಹೀಗಿದ್ದರೂ ಕು೦ತಿಯು ತನ್ನ ಮಗನಿವನು ಎ೦ದು ಕ೦ಡುಹಿಡಿಯಲಾಗಿ, ಅರ್ಜುನನು ತಾನೊಬ್ಬ ಹಾಡು ಹೇಳಿ ಭಿಕ್ಷೆ ಬೇಡುವವನೆ೦ದು ಆಕೆಯನ್ನು ನ೦ಬಿಸುತ್ತಾನೆ. ಹೀಗೆ ಹಾಡುತ್ತಲೇ ತನ್ನ ೧೨ ವರ್ಷದ ಅವಧಿಯ ವನವಾಸವನ್ನು ಮುಗಿಸಿ, ಅದರ ತರುವಾಯ ತನ್ನ ಈ ಬಿರುದಾವಳಿಗಳೆಲ್ಲವನು ಹರಿಯುವ ನದಿಯಲ್ಲಿ ತೇಲಿಬಿಟ್ಟು ಬರಲು ತನ್ನ ಸೇವಕರಿಗೆ ಕೊಟ್ಟು ಕಳುಹಿಸುತ್ತಾನೆ. ಆ ಮಾರ್ಗದಲ್ಲಿ ಬ೦ದ೦ತ ಬಡವನೊಬ್ಬನು ಆ ವೇಷ-ಭೂಷಣಗಳ ಹಿ೦ದಿನ ಕಥೆಯನ್ನು ಕೇಳಿ, ಅದನ್ನು ನೀರಿಗೆ ಬಿಡುವ ಬದಲು ತನಗೇ ನೀಡಿರೆ೦ದು ಪಡೆದು, ಹಾಡುತ್ತಾ ಹೊರಟುಹೋಗುತ್ತಾನೆ. ಈ ರೀತಿಯಾಗಿ, ಜೋಗಿ ಆಟದ ಪರ೦ಪರೆ ಪ್ರಾರಂಭವಾಯಿತೆ೦ದು ಜಾನಪದದ ನ೦ಬಿಕೆ. ರಸವತ್ತಾದ ಲಾವಣಿಗಳು, ಪದ್ಯಗಳು, ಹಾಡುಗಳ ಕಟ್ಟಿ; ಮುಖ್ಯ ಕಥಾಭಾಗದ ನಡುವೆ ಸಣ್ಣ ಸಣ್ಣ ಉಪಕಥೆಗಳ ಪೋಣಿಸಿ ಹೇಳುವ ಆ ಪರಿ, ಕೇಳಿ ಸವಿದರಷ್ಟೇ ತಿಳಿವುದು... ಬನ್ನಿ, ಇದೇ ಮೇ ೨೫ನೇ ತಾರೀಖು, ಭಾನುವಾರ ಸಮಯ : ಸ೦ಜೆ ೪ ಘ೦ಟೆಗೆ, ಸ್ಥಳ : ಗ್ರಂಥಾಂಗಣ ಕೇಂದ್ರೀಯ ಗ್ರಂಥಾಲಯ ಹಂಪಿನಗರ(ಆರ್.ಪಿ.ಸಿ ಲೇಔಟ್) ಬೆಂಗಳೂರು ಇಧೇ ಜೋಗಿ ಆಟ, ಅವಿರತದಿ೦ದ ನಿಮ್ಮ ಮು೦ದೆ...

Monday, May 12, 2014

"Facebook ಕವನ - ಹಡಪದ್ ಗಾಯನ"

ಇದು, ಅವಿರತ ತಂಡದ ಮತ್ತೊಂದು ಸದಭಿರುಚಿಯ ಕಾರ್ಯಕ್ರಮ. Facebookನ ಕವನಗಳಿಗೆ ಗಾಯನದ ರೂಪ ಕೊಡುವ ಮೊಟ್ಟ ಮೊದಲ ವಿನೂತನ ಪ್ರಯೋಗ ಇದಾಗಿತ್ತು. Facebookನಲ್ಲಿಯ ಆಯ್ದ ಕವನಗಳು ರಾಮಚಂದ್ರರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿಬಂದವು ಹಾಗೇ ಕೆಲವು ರಂಗಗೀತೆಗಳು, ಭಾವಗೀತೆಗಳು ಕೂಡ ಹಾಡಲ್ಪಟ್ಟವು. ನವ ಕವಿಗಳಿಗೆ ಬರವಣಿಗೆಯ ವಿಸ್ತಾರಕ್ಕೆ ಇದೊಂದು ಉತ್ತಮ ವೇದಿಕೆಯಾಯಿತು. ರಾಮಚಂದ್ರರು FBಲ್ಲಿ ಗೀಚಿದ ಕವನಗಳು ಹಾಗೂ ಕೆಲ ಆಯ್ದ ಭಾವಗೀತೆಗಳು ಸಂಗೀತ ರೂಪಕೊಡುವಲ್ಲಿ ಕಷ್ಟವಾಗಿದ್ದರೂ ಅತ್ಯುತ್ತಮವಾಗಿ ರಾಗ ಸಂಯೋಜಿಸಿ & ಮನೋಜ್ಞವಾಗಿ ಹಾಡಿ ಶ್ರೋತೃಗಳನ್ನು ಮನರಂಜಿಸಿದರು. ಗಾಯಕಿ ಸ್ಪರ್ಶ ಕೂಡ ಸುಂದರವಾಗಿ ಹಾಡಿದರು. ಹಡಪದ್ ಇತ್ತೀಚಿನ ದಿನಗಳ ಒಬ್ಬ ಅದ್ಭುತ ಗಾಯಕ ಹಾಗೂ ಸಂಗೀತ ಲೋಕದ ನವ ಮೋಡಿಗಾರವೆನ್ನುವದರಲ್ಲಿ ಸಂದೇಹವೇ ಇಲ್ಲ. ಅವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಮತ್ತು ಅವಿರತದ ಜೊತೆಗಿನ ಬಾಂಧವ್ಯ ಗಟ್ಟಿಯಾಗಲಿ ಎಂಬ ಆಶಯ.ಕಾರ್ಯಕ್ರಮಕ್ಕೆ ಹಾಜರಿದ್ದು, ಹಡಪದ್ ಹಾಗೂ ತಂಡದ ಗಾಯನವನ್ನು ಆಸ್ವಾದಿಸಿ, ನವ ಕವಿಗಳಿಗೆ ಉತ್ತೇಜನ ನೀಡಿ, ಅವಿರತದ ಈ ಹೊಸ ಪ್ರಯತ್ನಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿಬೆಂಬಲಿಸಿದ ಕವಿಗಳಾದ ಏಚ್. ಎಸ್. ವೆಂಕಟೇಶ ಮೂರ್ತಿ ಹಾಗೂ ಬೀ. ಆರ್. ಲಕ್ಷ್ಮಣರಾವ್ ಅವರಿಗೆ ನಮ್ಮ ಹೃತ್ಪೂರ್ವಕ ನಮನಗಳು. ಹಡಪದ್, ಸ್ಪರ್ಶ ಹಾಗೂ ಸಂಗಡಿಗರಿಗೆ ಉತ್ತಮ ಸಂಗೀತ ಸಂಜೆ ನೀಡಿದಕ್ಕೆ ಅಭಿನಂದನೆಗಳು. ನಮ್ಮ ತಂಡಕ್ಕೆ ಬೆಂಬಲಿಸಿದ ಹಾಗೂ ಈ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತ & ವೀಕ್ಷಕ ವರ್ಗಕ್ಕೆ ನಮ್ಮ ಧನ್ಯವಾದಗಳು. ಅವಿರತಕ್ಕೂ ಸಂತೃಪ್ತಿಯ ಭಾವ ತಂದ ಮತ್ತೊಂದು ಸಂಜೆಯ ವಿಶಿಷ್ಟ ಕಾರ್ಯಕ್ರಮ ಇದಾಯಿತು.

Wednesday, May 7, 2014

ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ನವರ ಗ್ರಾಮೀಣ ಮಕ್ಕಳ ಕಲಿಕಾ ಶಿಬಿರದಲ್ಲಿ ಅವಿರತವತಿಯಿಂದ ಕಂಪ್ಯೂಟರ್ ಶಿಕ್ಷಣ.



ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಈ ಬೇಸಿಗೆಯಲ್ಲಿ ಮಂಡ್ಯ ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ವಿಶಿಷ್ಟವಾದ ಹತ್ತು ದಿನಗಳ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ’ಅವಿರತ ಪ್ರತಿಷ್ಟಾನ’ವೂ ಕೈ ಜೋಡಿಸಿದ್ದು ಹೆಮ್ಮೆಯ ಸಂಗತಿ.

ಗ್ರಾಮೀಣ ಮಕ್ಕಳಿಗಾಗಿಯೇ ರೂಪಿಸಿದ್ದ ಈ ಶಿಬಿರವು ಮುಖ್ಯವಾಗಿ ರಂಗ ಶಿಕ್ಷಣ, ಇಂಗ್ಲೀಷ್ ಕಲಿಕೆ, ಕಂಪ್ಯೂಟರ್ ಶಿಕ್ಷಣ ಹಾಗೂ ಸಾಮಾನ್ಯ ವಿಜ್ಞಾನ ವಿಷಯಗಳನ್ನೊಳಗೊಂಡಿತ್ತು.  ಸ್ಪರ್ಧಾ

ತ್ಮಕ ಜಗತ್ತನ್ನು ಎದುರಿಸುವ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳನ್ನು ಸಬಲರನ್ನಾಗಿ ಮಾಡಿ, ಅವರ ಹಿಂಜರಿಕೆಯನ್ನು ಹೋಗಲಾಡಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು.

ಈ ಶಿಬಿರದಲ್ಲಿ ಕಂಪ್ಯೂಟರ್ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು "’ಅವಿರತ ಪ್ರತಿಷ್ಟಾನ" ವಹಿಸಿಕೊಂಡಿತ್ತು. ಅದಕ್ಕೆ ಸಂಬಂಧಪಟ್ಟ ಕೆಲವು ಮುಖ್ಯಾಂಶಗಳು ಹೀಗಿವೆ.

೧. ಕಂಪ್ಯೂಟರ್ ಶಿಬಿರವು ಏಪ್ರಿಲ್ ೩೦ ರಿಂದ ಮೇ ೭ ರ ತನಕ ನಡೆಯಿತು.  ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ಕಂಪ್ಯೂಟರ್  
    ಶಿಕ್ಷಣಕ್ಕೆ ಮೀಸಲಾಗಿತ್ತು. ಒಂದು ಗಂಟೆ ಪ್ರ್ಯಾಕ್ಟಿಕಲ್ಸ್ ಹಾಗೂ ಎರಡು ಗಂಟೆ ಥಿಯರಿ ತರಬೇತಿ ಕೊಡಲಾಯಿತು.
೨. ಮಂಡ್ಯ ಜಿಲ್ಲೆಯ ಗ್ರಾಮೀಣ ಶಾಲೆಯ ೭ ರಿಂದ ೧೦ನೇ ತರಗತಿಯ ಸುಮಾರು ೮೦ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿದ್ದರು.
೩. ಕಂಪ್ಯೂಟರ್ ನ ಪ್ರಾಥಮಿಕ ವಿಷಯಗಳಾದ, ಹಾರ್ಡ್‌ವೇರ್, ಸಾಫ್ಟ್‌ವೇರ್, ಎಮೆಸ್ ವರ್ಡ್, ಎಮೆಸ್ ಎಕ್ಸ್ಸೆಲ್, ಪೇಂಟಿಂಗ್, ಇಂಟರ್‌ನೆಟ್
   ಮುಂತಾದವುಗಳ ಪರಿಚಯ ಮಾಡಿಸಲಾಯಿತು. ಸ್ವತಂತ್ರವಾಗಿ ಕಂಪ್ಯೂಟರ್ ನಿರ್ವಹಿಸುವ ಆತ್ಮವಿಶ್ವಾಸ ತರುವುದೇ ಇದರ ಉದ್ದೇಶವಾಗಿತ್ತು.
೪. ಈ ವಿಷಯದ ಸಲುವಾಗಿ ಉಪಯುಕ್ತ ಪಠ್ಯಕ್ರಮವನ್ನು ಸಿದ್ಧ ಪಡಿಸಲಾಗಿತ್ತು ಮತ್ತು ಎಲ್ಲ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಪಠ್ಯ ಪುಸ್ತಕಗಳನ್ನು ಅವಿರತವತಿಯಿಂದ ಒದಗಿಸಲಾಯಿತು.
೫. ಈ ಶಿಬಿರವು ಸತತ ಹತ್ತು ದಿನಗಳ ಕಾಲ ನಡೆದು, ಶಿಬಿರದಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳಿಗೂ, ಶಿಕ್ಷಕರಿಗೂ, ಸ್ವಯಂ ಸೇವಕರಿಗೂ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು
೬. ಅವಿರತದಿಂದ ಪ್ರತಿದಿನ ಒಂದೊಂದು ತಂಡದಂತೆ, ಒಟ್ಟು ೫೦ ಸ್ವಯಂ ಸೇವಕರು ತರಬೇತಿಯಲ್ಲಿ ಭಾಗವಸಿದ್ದರು.
೭. ಅವಿರತವತಿಯಿಂದ ಮೆಡಿಕಲ್ ಕ್ಯಾಂಪ್ ಕೂಡ ಇದೆ ಸಂದರ್ಭದಲ್ಲಿ ಮಾಡಲಾಯಿತು.

ಮಕ್ಕಳ ಉತ್ಸಾಹ, ಕಲಿಕಾ ಬಯಕೆ & ತುಡಿತ ನಮ್ಮನ್ನು ಇನ್ನಷ್ಟು ಭಾಗವಸಿಸುವಿಕೆಗೆ ಪ್ರೇರೇಪಿಸಿತು. ಶಿಬಿರದಲ್ಲಿ ಪಾಲ್ಗೊಂಡಿದ್ದಕ್ಕೆ ಧನ್ಯತಾ ಭಾವ ನಮ್ಮದಾಗಿತ್ತು.

ಅವಿರತಕ್ಕೆ ಈ ಅವಕಾಶ ನೀಡಿದಕ್ಕೆ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ನವರಿಗೆ ಹೃತ್ಪೂರ್ವಕ ಧನ್ಯಾವಾದಗಳು.