Thursday, June 5, 2014

ನೆಲೆ ನರೇಂದ್ರ ಆವರಣದಲ್ಲಿ ವನಮಹೋತ್ಸವ

ಆತ್ಮೀಯರೆ,

ಅವಿರತ ಮತ್ತು ಒರಾಕಲ್ ಸಂಸ್ಥೆಯ ಸಹಯೋಗದೊಂದಿಗೆ ನೆಲೆ ನರೆಂದ್ರ ಆವರಣದಲ್ಲಿ ಇದೇ ಶನಿವಾರ ವನ ಮಹೋತ್ಸವವನ್ನು ಆಯೋಜಿಸಲಾಗಿದೆ. ಅನಾಥ ಮಕ್ಕಳಿಗೆ ಗೌರವಯುತವಾದ ಜೀವನವನ್ನು ರೂಪಿಸಿಕೊಡುವಲ್ಲಿ ಶ್ರಮಿಸುತ್ತಿರುವ ನೆಲೆ ಸಂಸ್ಥೆಯೊಡನೆ ಕೈ ಜೋಡಿಸಲು ಅವಿರತ ತಂಡಕ್ಕೆ ಹೆಮ್ಮೆಯಿದೆ.

ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ನೋಡಿ: nelehsp.org

ಕಾರ್ಯಕ್ರಮದ ವಿವರ ಹೀಗಿದೆ:

ದಿನಾಂಕ : 7 ಜೂನ್ 2014 ಶನಿವಾರ
ಸ್ಥಳ : ನೆಲೆ ನರೇಂದ್ರ ಆವರಣ

12-12.30pm - ನೆಲೆ ಆವರಣದಲ್ಲಿ ಸೇರುವುದು
12.30-1pm - ನೆಲೆ ಸಂಸ್ಥೆಯ ಬಗ್ಗೆ ಕಿರು ಚಿತ್ರ ಪ್ರದರ್ಶನ
1-2pm - ನೆಲೆಯ ಮಕ್ಕಳೊಡನೆ ಊಟ
2-3.30pm - ವನ ಮಹೋತ್ಸವ - ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ
3.30pm-5.30pm - ಮಕ್ಕಳಿಗಾಗಿ ಅವಿರತ ತಂಡ ಹಾಗೂ ಒರಾಕಲ್ ಸಂಸ್ಠೆಯ ಉದ್ಯೋಗಿಗಳಿಂದ ಮನರಂಜನಾ ಕಾರ್ಯಕ್ರಮ

ಸ್ಥಳ:
ನೆಲೆ ನರೇಂದ್ರ
Nele Narendra (named after Swamy Vivekananda’s Poorvashrama name), Opposite Veena Education Trust, No.9 / 2,  Main Road, Lakshmidevi Nagar, Laggere, Bengaluru – 560096,
Phone No. 9742426346

ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಆಸಕ್ತರು ದಯವಿಟ್ಟು ಬನ್ನಿ. ನಿಮ್ಮ ಮಕ್ಕಳನ್ನೂ ಕರೆತನ್ನಿ.


ಧನ್ಯವಾದಗಳು,
ಅವಿರತ ಬಳಗ

Sunday, May 25, 2014

ಎಲ್ಲೋ ಜೋಗಪ್ಪ ನಿನ್ನರಮನೆ...ಜೋಗಿ ಸಂಭ್ರಮ

ನಿನ್ನ ಮನದಲ್ಲೇ ನನ್ನರಮನೆ ಎಂದು ಸಾರಿ ಹೋದ ಜೋಗಿ...!!

ಹೌದು..ನಿನ್ನೆ ನಡೆದ ಜೋಗಿ ಆಟ ಪ್ರೇಕ್ಷಕರ ಮನಸೂರೆಗೊಂಡಿತು! ಮಲೆನಾಡಿನ ಈ ವಿಶಿಷ್ಟ ಕಲೆ ಬೆಂಗಳೂರಿಗರನ್ನು ಆಕರ್ಷಿಸಿತು. ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ||, ಶಿವಮೊಗ್ಗ ಜಿಲ್ಲೆಯ ಕೆ. ಗುಡ್ಡಪ್ಪ ಜೋಗಿ, ನಾಗರಾಜ ಜೋಗಿ ಮತ್ತು ತಂಡದವರು "ವೀರಸೇನ ಕೋಕಿಲೆ" ಅರ್ಥಾತ್ "ವಸನಶೀಲ ಕುಸುಮಮ೦ಜರಿ" ಎ೦ಬ ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಉತ್ತಮವಾಗಿ ಹಾಡಿದರು.

ರಸವತ್ತಾದ ಲಾವಣಿಗಳು, ಪದ್ಯಗಳು, ಹಾಡುಗಳ ಕಟ್ಟಿ; ಮುಖ್ಯ ಕಥಾಭಾಗದ ನಡುವೆ ಸಣ್ಣ ಸಣ್ಣ ಉಪಕಥೆಗಳ ಪೋಣಿಸಿ ಹೇಳುವ ಪರಿ ಅತ್ಯುತ್ತಮವಾಗಿತ್ತು. ಅತ್ತೆ-ಸೊಸೆಯಂದಿರ ಬಾಂಧವ್ಯ, ಹಿಂದಿನ ದಿನಗಳು & ಇಂದಿನ ದಿನಗಳ ಬದಲಾವಣೆ, ವರದಕ್ಷಿಣೆಯ ಬಗ್ಗೆ, ತಾಯಿಯ ಬಗ್ಗೆ, ತಾಯಿ-ಮಗಳ ಮಮತೆಯ ತುಡಿತದ ಬಗೆಗಿನ ಸುಂದರವಾದ & ಹಾಸ್ಯಪೂರ್ವಕ ಲಾವಣಿಗಳನ್ನು ಪ್ರಸ್ತುತಪಡಿಸಿದರು.

ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಜರಿದ್ದು, ಕಾರ್ಯಕ್ರಮದ ಕೊನೆತನಕ ಜೋಗಿ ಸಂಭ್ರಮದಲ್ಲಿ ಭಾಗಿಯಾಗಿ & ಅವಿರತದ ಕಾರ್ಯಗಳಿಗೆ ಬೆನ್ನು ತಟ್ಟಿದರು.

ಅವಿರತದ ಈ ವಿಶೇಷ ಪ್ರಯೋಗ ಜನರ ಮೆಚ್ಚುಗೆಗೆ ಭಾಜನವಾಯಿತು. ಕಾರ್ಯಕ್ರಮಕ್ಕೆ ಸಹಕಾರಿಯಾದ ಎಲ್ಲ ಮಿತ್ರರಿಗೂ ಹಾಗು ತಾಳ್ಮೆಯಿಂದ ಕಥೆಯನ್ನು ಸವಿದ ಪ್ರೇಕ್ಷಕರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.

ಮತ್ತೆ-ಮತ್ತೆ ಉತ್ತೇಜನದ ನಿರೀಕ್ಷೆಯಲ್ಲಿ...

ಅವಿರತ ತಂಡ.


 




 
 


 

Thursday, May 22, 2014

"ಅವಿರತದಿಂದ ಮತ್ತೊಂದು ಅಪರೂಪದ ಪ್ರಯತ್ನ "

ನಿಮಗೆ ನೆನಪಿದೆಯಾ? ನಾವು ಸಣ್ಣವರಿದ್ದಾಗ ನಮ್ಮ ಅಜ್ಜ-ಅಜ್ಜಿ, ಅಪ್ಪ-ಅಮ್ಮ ನಮಗೆ ಕತೆ-ಹಾಡು ಹೇಳುವಾಗ ನಾವು ಮೂಗು,ಬಾಯಿ, ಕಣ್ಣರಳಿಸಿಕೊಂಡು ಕೇಳುತ್ತಿದ್ದ ಆ ದಿನಗಳು...ಆ ಕತೆಗಳು ನಮ್ಮ ಕಲ್ಪನಾಲೋಕವನ್ನು ಎಷ್ಟು ವಿಸ್ತಾರ ಮಾಡ್ತಾ ಇದ್ವು ಅಲ್ವಾ? ಆದರೆ ಈಗ ನಮ್ಮ ಮಕ್ಕಳಿಗೆ ಕತೆ-ಹಾಡು ಹೇಳುವಷ್ಟು ಸಮಯ ನಮಗಿದೆಯೇ? ಈ ಬೆಂಗಳೂರಿನ ಜೀವನದ ಜಂಜಾಟದಲ್ಲಿ ಮಕ್ಕಳಿಗೆ ಕತೆ ಹೇಳುವ ಇಷ್ಟವಿದ್ದರೂ ಸಮಯ ಹೊಂದಿಸೋದು ಕಷ್ಟ ಕಷ್ಟ ! ! ಬೇಸರ ಮಾಡಿಕೊಳ್ಳಬೇಡಿ ನಮ್ಮ ಬೆಂಗಳೂರಿನವರಿಗಾಗಿಯೇ ಹಾಡು-ಕತೆಗಳನ್ನು ಹೇಳಿ ರಂಜಿಸಲು ನಾವು ಮಲೆನಾಡಿನಿಂದ ಕತೆಗಾರರನ್ನು ಕರೆಸುತ್ತಿದ್ದೇವೆ. ಗುಡ್ಡಪ್ಪ ಜೋಗಿಗಳ ಜೋಳಿಗೆಯಲ್ಲಿ ಅದೆಂತಹ ಅದ್ಭುತ ಕತೆಗಳು-ಹಾಡುಗಳು ಅಡಗಿ ಕುಳಿತಿದ್ದಾವೋ ಏನೋ?

ಬನ್ನಿ ಆ ಕತೆ - ಹಾಡುಗಳನ್ನು "ಎಲ್ಲೋ ಜೋಗಪ್ಪ ನಿನ್ನರಮನೆ" ಕಾರ್ಯಕ್ರಮದಲ್ಲಿ ಒಟ್ಟಿಗೆ ಕುಳಿತು ಕೇಳಿ ಖುಷಿಪಡೋಣ.

ಇದೇ ಭಾನುವಾರ ಅಂದರೆ ಮೇ 25ನೇ ತಾರೀಖು ಸಂಜೆ 4.00 ಕ್ಕೆ
ಸ್ಥಳ : ಗ್ರಂಥಾಂಗಣ, ಕೇಂದ್ರೀಯ ಗ್ರಂಥಾಲಯ, ಹಂಪಿನಗರ (ಆರ್.ಪಿ.ಸಿ ಲೇಔಟ್), ವಿಜಯನಗರ ಬೆಂಗಳೂರು

ದಯವಿಟ್ಟು ಮನೆ ಮಂದಿಯೆಲ್ಲಾ ಬಂದು ಒಂದು ಅಪರೂಪದ ಜೋಗಿಯಾಟಕ್ಕೆ ಜೊತೆಯಾಗಿ.

ಬರ್ತೀರಾ ಅಲ್ವಾ? ಕಾಯ್ತಾ ಇರ್ತೀವಿ.....