Saturday, April 4, 2015

ಬೇಂದ್ರೆ ಬೆಳಗು

ಬಾ ಬಾರೋ, ಬಾರೋ ಬಾರೋ
ಬಾರೋ ಕಲಾ ಸೌಧಕ್ಕ, ಹೊರಳಿ ನಮ್ಮೀ ಅವಿರತಕ್ಕ...

ಬೇಂದ್ರೆ ಸೆಳೆಯುವ ಮಾಯಕ್ಕೆ,
ಬೇಂದ್ರೆ ಕಟ್ಟಿದ ಭಾವಕ್ಕೆ,
ಬೇಂದ್ರೆ ಬೆಡಗಿನ ಬೆಳಗಿಗೆ,
ಬೇಂದ್ರೆ ಸಾಹಿತ್ಯ ಸಂಭ್ರಮಕ್ಕೆ,
ಚಂದದ ಸಂಗೀತ ರಾಗವೊಂದು ಬಿದ್ದಿದೆ
ಕೇಳುವ ಸುಖ ಬೇಡ ಯಾರಿಗೆ?

ನಗರ ಜನವೇ ಬರಲಿದೆ,
ಶ್ರೋತೃಗಳಿಗೆ ಸು ಕರಣವಿದೆ,
ಅರಸಿಕನಿಗೂ ಆಲಾಪ ಸೆಳದಿದೆ,
ಗಾಯನಕ್ಕೆ ರಾಗವು ತುಂಬಿದೆ,
ಸಂಗೀತ ಪ್ರೇಮಿಗಳು ಮನೆಯಿಂದ ಎದ್ದರೊ,
ಬೇಂದ್ರೆ ಬೆಳಗು ಬೆರಗಲಿದೆ.

ಕವಿತೆ ಕಡಲಿಗೂ ಹರಿದಿದೆ,
ಗುಡ್ಡದ ಮರದೊಳೂ ಕೇಳಿದೆ,
ಮಾಸ್ತರ ಮಾಯೆ ಎಲ್ಲೂ ಹರಡಿದೆ,
ಬೇಸರ ಇಲ್ಲಿಂದ ಕಾಲ್ಕಿತ್ತಿದೆ,
ಹೇಳೊ ಸ್ನೇಹಿತ, ಬೇರೆ ಎಲ್ಲಿ
ಈ ರೀತಿ ನಲಿವ ಪಡಿವೆ..!!

Tuesday, March 10, 2015

"ಬೇಂದ್ರೆ ಕಾವ್ಯ – ಕಾರ್ಯಾಗಾರ"

ಆತ್ಮೀಯ ಸಾಹಿತ್ಯಾಸಕ್ತರೇ.,


ಏಪ್ರಿಲ್ ೫ಕ್ಕೆ ಕೆ.ಎಚ್ ಕಲಾಸೌಧ ದಲ್ಲಿ ಬೇಂದ್ರೆ ಕಾವ್ಯ ಗಾಯನ "ಬೇಂದ್ರೆ ಬೆಳಗು” ಕಾರ್ಯಕ್ರಮ ಇದ್ದರೆ ಇದರದೇ ಸರಣಿಯ ಎರಡನೇ ಹಾಗೂ ಕೊನೆಯ ದಿನದ ಕಾರ್ಯಕ್ರಮ "ಬೇಂದ್ರೆ ಕಾವ್ಯ – ಕಾರ್ಯಾಗಾರ" ಏಪ್ರಿಲ್ 12, ಭಾನುವಾರದಂದು.



ಈ ಕಾರ್ಯಕ್ರಮವು ಒಂದು ಸಾಹಿತ್ಯ ಮಂಟಪವಾಗಿದ್ದು, ಇಲ್ಲಿ ಶಿಬಿರಾರ್ಥಿಗಳು ಮುಖ್ಯ ಭೂಮಿಕೆಯನ್ನು ವಹಿಸಬೇಕಾಗುತ್ತೆ. ಈ ಶಿಬಿರದ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ಮತ್ತು ಇತರ ಸಾಮಾನ್ಯ ಶಿಬಿರಾರ್ಥಿಗಳಿಗೆ ಹಿರಿಯ ಸಾಹಿತಿಗಳ ಜತೆಗಿನ ಸಂವಾದದ ಮೂಲಕ ಬೇಂದ್ರೆ ಯವರ ಕಾವ್ಯದ ಮೂಲಕ ಇತರ ಎಲ್ಲ ಕಾವ್ಯಗಳ ಬಗೆಗಿನ ಆಸಕ್ತಿ ಹೆಚ್ಚಿಸುವುದು ಮತ್ತು ಹಾಗೂ ಅಧ್ಯಯನದ ಕಡೆಗೆ ಸಾಗಲು ಸಿದ್ದಗೊಳಿಸುವುದು
ಹಾಗಾಗಿ, ನಾವು ಕಳಿಸುವ ಬೇಂದ್ರೆಯವರ ಕವಿತೆಗಳನ್ನು ಶಿಬಿರಕ್ಕೆ ಬರುವ ಮುನ್ನ, ಪೂರ್ವಭಾವಿಯಾಗಿ ಓದಿಕೊಂಡು ಬಂದಿರಬೇಕಾಗುತ್ತದೆ. ಶಿಬಿರದ ದಿನ, ಆ ಕವನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು, ಆಲೋಚನೆಗಳನ್ನು (8-10 ಸದಸ್ಯರ) ಸಣ್ಣ ತಂಡಗಳಲ್ಲಿ ಪರಸ್ಪರ ಚರ್ಚೆ ಮಾಡಬೇಕಾಗುತ್ತೆ. ನಂತರ ಆ ತಂಡದ ಒಟ್ಟು ಅಭಿಪ್ರಾಯವನ್ನು ಮಂಡಿಸಬೇಕಾಗುತ್ತದೆ. ಶಿಬಿರದ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳ ನಡುವಿನ ಚರ್ಚೆಯನ್ನು ನಿಭಾಯಿಸುತ್ತಾ, ಕೃತಿಯೊಳಗಿನ ಲೇಖಕರ ಆಲೋಚನ ಕ್ರಮದ ಬಗ್ಗೆ ಪರಿಚಯಿಸುತ್ತಾ, ಚರ್ಚೆ, ವಿಚಾರ ವಿನಿಮಯ ಸಾಗಬೇಕಿರುವ ದಾರಿಯ ಮಾರ್ಗದರ್ಶನ ಮಾಡುತ್ತಾರೆ. 



ಶಿಬಿರದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಭಾಗವಹಿಸುವ ಪ್ರತಿಯೊಬ್ಬ ಶಿಬಿರಾರ್ಥಿಗೂ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸಬೇಕಾಗಿರುವುದರಿಂದ ಈ ಸಾಹಿತ್ಯ ಶಿಬಿರ ಕೇವಲ 40 ಜನ ಶಿಬಿರಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಕೋರುತ್ತೇವೆ.



ಶಿಬಿರದ ದಿನಾಂಕ: 12 ಏಪ್ರಿಲ್ 2015 , ಭಾನುವಾರ
ಸ್ಥಳ: ಸರ್ಕಾರಿ ವಿಜ್ಣಾನ ಕಾಲೇಜು, ಕೆ.ಆರ್.ಸರ್ಕಲ್ ಬಳಿ, ನೃಪತುಂಗ ರಸ್ತೆ, ಬೆಂಗಳೂರು.



ಶಿಬಿರದ ವಿನ್ಯಾಸ:
ಶಿಬಿರದ ಕಾರ್ಯಕ್ರಮಗಳು ಈ ಕೆಳಗಿನಂತೆ 04 ಭಾಗಗಳಲ್ಲಿ ನಡೆಯುತ್ತದೆ.
09:30 – 11:00 AM 
11:30 – 01:00 PM
02:00 – 3:30 PM
04:00 – 5:30 PM 



ಪ್ರತಿ ಭಾಗದಲ್ಲಿ ಆಯ್ದು ಮೊದಲೇ ನಿಗದಿಪಡಿಸಿದ ಒಂದು ಅಥವಾ ಎರಡು ಕವಿತೆಗಳ ಸಂವಾದ, ವಿಚಾರ ವಿನಿಮಯ ಇರುತ್ತದೆ.90 ನಿಮಿಷಗಳ ಅವಧಿಯ ವಿಂಗಡಣೆ ಹೀಗಿರುತ್ತದೆ:
  • ಮೊದಲ 20 ನಿಮಿಷ – ಪ್ರತಿ ತಂಡಗಳ ಚರ್ಚೆ / ವಿನಿಮಯ.
  • ನಂತರದ 30 ನಿಮಿಷ – ಪ್ರತಿ ತಂಡದಿಂದ ಆಯ್ದ ಒಬ್ಬ ಶಿಬಿರಾರ್ಥಿ 5-6 ನಿಮಿಷಗಳಲ್ಲಿ ಅವರ ಒಟ್ಟೂ ಅಭಿಪ್ರಾಯ ಮಂಡಿಸುವುದು · ಕಡೆಯ 40 ನಿಮಿಷ – ಆ ಕವನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ ಮತ್ತು ಶಿಬಿರಾರ್ಥಿಗಳ ಅಭಿಪ್ರಾಯಕ್ಕೆ ಪ್ರತಿಕ್ರಿಯೆ.

ಸೂಚನೆಗಳು:
೧) ಶಿಬಿರದಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡವರಿಗೆ ಕವನಗಳನ್ನು ಮೈಲ್ ಮೂಲಕ ತಲುಪಿಸಲಾಗುವುದು.
೨) ಶಿಬಿರದಲ್ಲಿ ಈ ಕೃತಿಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಇದ್ದು. ಎಲ್ಲರು ಪಾಲ್ಗೊಳ್ಳಬೇಕು.
೩) ಚರ್ಚೆಯಲ್ಲಿ ಯಾರನ್ನು ವೈಯುಕ್ತಿಕವಾಗಿ ನಿಂದನೆ ಮಾಡಬಾರದು ಮತ್ತು ಮುಕ್ತವಾಗಿ ಇನ್ನೊಬರ ಆಲೋಚನೆಗಳನ್ನು ಕೇಳಿಸಿಕೊಳ್ಳುವ ಮನೋಭಾವ ಇರಬೇಕು.
೪) ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಬರಬೆಕು. ನಡುವೆ ಬಂದು ಸೇರುವ ಅಥವಾ ಎದ್ದು ಹೋಗುವ ಅವಕಾಶ ಇರುವುದಿಲ್ಲ.
೫) ಪೂರ್ತಿ ದಿನದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿದ್ದವರು ಮಾತ್ರ ಬರಬೇಕು.



ಈ ಶಿಬಿರದಲ್ಲಿ ಭಾಗವಹಿಸುವವರು ದಯವಿಟ್ಟು ತಮ್ಮ ಹೆಸರು , ವಿದ್ಯಾಭಾಸ , ವೃತ್ತಿಯ ಸ್ವ-ವಿವರಗಳ ಜೊತೆಗೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಈ ಕೆಳಕಂಡ ಈ-ಮೈಲ್ ವಿಳಾಸಗಳಿಗೆ ಕಳುಹಿಸಬೇಕಾಗಿ ವಿನಂತಿಸುತ್ತೇವೆ.



ಪ್ರಸನ್ನ ಲಕ್ಷ್ಮೀಪುರ: prasanna.lakshmipura@gmail.com 
ಸತೀಶ್ ಗೌಡ: kts_gowda@yahoo.com
ಅಶ್ವತ್ಥ : ashwathshikaripur@yahoo.com



Monday, March 9, 2015

ಬೇಂದ್ರೆ ಬೆಳಗು

"ಬೇಂದ್ರೆ" ಅನ್ನೊದ್ರಾಗ ಏನೊ ಖುಷಿ ಅದ..ನಮ್ಮ ಮಾಸ್ತರ ಬರೀ ಕವಿ ಅಲ್ಲ್ರೀ.. ಅವರೊಬ್ಬ ಮಹಾ ಶಬ್ದ ಗಾರುಡಿಗ ಅದಾರ. ಅವ್ರು ಸಾಹಿತ್ಯದಾಳಕ್ಕ ಇಳಿದಷ್ಟು ಬ್ಯಾರೆ ಯಾರು ಇಳ್ಯಾಕ ಆಗಿಲ್ಲ. ನಮ್ಮ ಈ ಯುಗದ ಕವಿ ಬಗ್ಗೆ ನಾವು ಒಂದು ಕಾರ್ಯಕ್ರಮ ಮಾಡ್ಲಿಕತ್ತೀವಿ. ಬೇಂದ್ರೆ ಕಾವ್ಯಧಾರೆಯ ಸವಿ ನೀವು ಚೂರು ಅನುಭವಿಸ್ರಿ. ತಪ್ಪದಾ ಬರ್ರಿ.

Saturday, February 14, 2015

ಹಿರಿಯ ನಾಗರೀಕರ ನಡಿಗೆ

"ನಾವು ಹಿರಿಯರು, ನೀವು ಕಿರಿಯರು...ಕೂಡಿರಲು ಚೈತನ್ಯವದು ಅಪ್ರತಿಮ"
ಈ ಶನಿವಾರ ಎಂದಿನಂತೆ ಮಾಮೂಲಿಯಾಗಿರದೆ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ಯುವಕರೂ ನಾಚುವಂತೆ ಹಿರಿಯರು ಅದಮ್ಯ ಉತ್ಸಾಹದೊಂದಿಗೆ ಓಟ/ನಡಿಗೆಯಲ್ಲಿ ಭಾಗವಹಿಸಿದ್ದು.
ವಯಸ್ಸು ದೇಹಕ್ಕೆ ಹೊರತು ಮನಸ್ಸು ಹಾಗೂ ಉತ್ಸಾಹಕ್ಕಲ್ಲ ಎಂಬ ಸಂದೇಶವನ್ನು ತಮ್ಮ ಪಾಲ್ಗೊಳ್ಳುವಿಕೆಯಿಂದ ಸಾರಿ ಹೇಳಿದರು. ೮೫ಕ್ಕೂ ಮೇಲ್ಪಟ್ಟ ವಯಸ್ಸಿನ ಹಿರಿಯರೂ ಅತ್ಯುತ್ಸಾಹದಿಂದ ಭಾಗವಹಿಸಿದ್ದು ಅಚ್ಚರಿಯ ಸಂಗತಿ.
ಕರ್ನಾಟಕ ಹಿರಿಯ ನಾಗರೀಕರ ಒಕ್ಕೂಟವು ಅವಿರತದ ಸಹಯೋಗದೊಂದಿಗೆ ಆಯೋಜಿಸಿದ್ದ ೧.೫ ಕಿಮೀ ದೂರದ "ಹಿರಿಯ ನಾಗರೀಕರ ನಡಿಗೆ/ ಓಟದಲ್ಲಿ" ಬೆಂಗಳೂರು ಹಾಗೂ ಸುತ್ತಮುತ್ತಲಿಂದ ಬಂದ ಸುಮಾರು ೩೫೦ಕ್ಕೂ ಹೆಚ್ಚು ಹಿರಿಯರು ಭಾಗವಹಿಸಿದ್ದರು. ಮನಸಾರೆ ಖುಷಿಪಟ್ಟು, ಕಿರಿಯರ ಬೆಂಬಲವನ್ನು, ಪ್ರಯತ್ನವನ್ನು ಬೆನ್ನು ತಟ್ಟಿ ಶ್ಲಾಘಿಸಿದರು.
ಅವಿರತಕ್ಕೆ ಈ ಅವಕಾಶವನ್ನು ಒದಗಿಸಿದ ಹಿರಿಯ ನಾಗರೀಕರ ಒಕ್ಕೂಟಕ್ಕೆ, ನಮ್ಮ ತಂಡದ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ಹಾಗೆಯೇ ಒಗ್ಗಟ್ಟಿನಲ್ಲಿ ಬಲವಿದೆ, ಯಶಸ್ಸಿದೆ ಎಂದು ತೋರಿದ, ಭಾಗವಿಸಿ ಮತ್ತು ಬೆಂಬಲಿಸಿದ ಅವಿರತದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು..!

Monday, November 17, 2014

ಕರ್ನಾಟಕ ರಾಜ್ಯೋತ್ಸವ ಆಚರಣೆ- ರಾಧಿಕಾ

ಅವಿರತ ತಂಡದಿಂದ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಹೊಂಗೆ ಮರದ ನೆರಳಿನಲ್ಲಿ ಧ್ವಜಾರೋಹಣ, ನಾಡಗೀತೆ, ಹಚ್ಚೇವು ಕನ್ನಡ ಗೀತೆಗಳ ಸಮೂಹ ಗಾಯನ,  ಕನ್ನಡ ಗೀತೆಗಳ ಗಾಯನ... ಹೀಗೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು.  

ಕೆಲವೇ ದಿವಸಗಳ ತಯಾರಿಯಲ್ಲಿ ಉತ್ತಮವಾಗಿ ಕನ್ನಡ ನೆಲದ ಹಿರಿಮೆಯ ಬಗ್ಗೆ ಹಾಡು ಕಲಿತು ಹಾಡಿದ ಪುಟಾಣಿಗಳಾದ ವಿಶಾಖ, ಅನನ್ಯ ಅವರ ಶ್ರಮ ಮೆಚ್ಚತಕ್ಕದ್ದು. ನಿಂತ ಕಾಲಲ್ಲೇ ಮಕ್ಕಳಿಗೆ ಕರ್ನಾಟಕದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದಾಗ ಉತ್ಸುಕರಾಗಿ ಭಾಗವಹಿಸಿದ ಮಕ್ಕಳೆಲ್ಲರಿಗೂ ಒಂದು ಮೆಚ್ಚುಗೆ. 

ಹಲವು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಬಹುತೇಕ, ಮತ್ತೊಂದು ರಜಾ ದಿನವಾಗಿ ಕಳೆದು ಹೋಗುತ್ತಿತ್ತು. ಅಬ್ಬರದ ಸಂಗೀತ,  ’ಅ’ ಕಾರ ’ಹ’ ಕಾರ ವ್ಯತ್ಯಾಸ ಗೊತ್ತಿಲ್ಲದ ಪುಢಾರಿಗಳ ಭಾಷಣ ಇವುಗಳ ನಡುವೆ ಯಾಕಪ್ಪಾ ಬರುತ್ತೆ ಈ ದಿವಸ ಅಂತ ಅನಿಸಿದ್ದೂ ಹೌದು. ಈ ಬಾರಿ ಆ ದಿನವನ್ನು ವಿಭಿನ್ನ ಹಾಗೂ ವಿಶೇಷವಾಗುವಂತೆ ಅವಿರತ ತಂಡ ಅರ್ಥಪೂರ್ಣವಾಗಿ ಆಚರಿಸಿತು.