Friday, January 22, 2016

ಮಲ್ಲಿಗೆ ಪರಿಷೆ

ಸ್ನೇಹಿತರೇ,

ಮಲ್ಲಿಗೆಯ ಪರಿಮಳ ಹರಡುತ್ತಿದೆ...ಪ್ರೇಮ ವೀಣೆ ಮತ್ತೆ ಮಿಡಿಯುತ್ತಿದೆ...!! ಇದು ಮನಸುಗಳು ಅರಳುವ ಸಮಯ..

ಅವಿರತವು, ಹೊಸ ವರುಷವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ವರ್ಷದ ಮೊದಲ ಕೊಡುಗೆ ರಂಗವಲ್ಲಿಯನ್ನು ಜನಮನ ತಲುಪಿಸಿ ಯಶಸ್ವಿಯಾಗಿದೆ.

ಅದು ರಂಗಲೋಕ ಇದು ಪ್ರೇಮಲೋಕ. ಹೌದು, ಕೆ ಎಸ್ ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಪ್ರೇಮ ಕಾವ್ಯ ಸುಗ್ಗಿಯ ಜೊತೆಗೆ ಚಿಕ್ಕದಾದ ವಿಶೇಷ ಮಲ್ಲಿಗೆ ಪರಿಷೆಯನ್ನು ಪ್ರಸ್ತುತಪಡಿಸುತ್ತಿದೆ.

ವಿನಯ ನಾಡಿಗ್ ಮತ್ತು ಸಂಗಡಿಗರ ಧ್ವನಿಯಲ್ಲಿ ಅರಳಲಿವೆ ಕೆ.ಎಸ್.ಎನ್ ಅವರ ಕವನ ಮೊಗ್ಗುಗಳು..! 

ಅವಿರತ ತಂಡದಿಂದ ಪ್ರೇಮ ಕವಿಯ ಸಂಭ್ರಮವನ್ನು ವಿಭಿನ್ನವಾಗಿ ಕಟ್ಟಿಕೊಡುವ, ವಿಶೇಷ ಅನುಭವವನ್ನು ನೀಡುವ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ  ಅತ್ಯಗತ್ಯ..!

ಬನ್ನಿ, ಈ ಮಲ್ಲಿಗೆ ಪರಿಷೆಯಲ್ಲಿ ಪಾಲ್ಗೊಳ್ಳಿ, ಆನಂದಿಸಿ..!

ನಿಮ್ಮ,
ಅವಿರತ ತಂಡ.

Thursday, December 17, 2015

ರಂಗವಲ್ಲಿ...

ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ರಂಗ ಗೀತೆಗಳ ಕಾರ್ಯಕ್ರಮವೊಂದು,  ಮುಂದಿನ ತಿಂಗಳು ಜನವರಿ 2 ರಂದು ಎಲ್ಲ ಅಡೆತಡೆಗಳ ನೀಗಿ ನಡೆಯಲಿದೆ. ಅದೇ "ರಂಗವಲ್ಲಿ".., ವಿಶೇಷ ಸಂಗೀತ ಸಂಜೆ..!

ಇಬ್ಬರು ರಂಗಕರ್ಮಿ, ಸಾಹಿತಿ, ಕವಿಗಳಾದ ಶ್ರೀ ಗೋಪಾಲ ವಾಜಪೇಯಿ ಹಾಗೂ ಕೆ ವೈ ನಾರಾಯಣಸ್ವಾಮಿಯವರ ಆಯ್ದ ಅಪರೂಪದ ಮಧುರವಾದ ರಂಗ ಗೀತೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ ಉದಯೋನ್ಮುಖ ಗಾಯಕ, ನಲ್ಮೆಯ ಗೆಳೆಯ ರಾಮಚಂದ್ರ ಹಡಪದ್ ಮತ್ತು ತಂಡದವರು.

ನಮ್ಮಅವಿರತ ತಂಡದ ಮತ್ತೊಂದು ಸದಭಿರುಚಿಯ ಈ ಕಾರ್ಯಕ್ರಮಕ್ಕೆ ದೃಶ್ಯ ಕಾವ್ಯ ತಂಡದವರು ಕೈ ಜೋಡಿಸಿದ್ದಾರೆ.

ಈ ರಂಗ ಸಂಭ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ..

ಸ್ಥಳ :
ಸಂಸ ಬಯಲು ರಂಗಮಂದಿರ,
ರವೀಂದ್ರ ಕಲಾಕ್ಷೇತ್ರ ಆವರಣ,
ಜೆ.ಸಿ. ರಸ್ತೆ, ಬೆಂಗಳೂರು.

ದಿನಾಂಕ: 02 ಜನವರಿ 2016

ದಯವಿಟ್ಟು ಇಂದೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿರಿ.

ನಿಮ್ಮ ನಿರೀಕ್ಷೆಯಲ್ಲಿ,
ಅವಿರತ ತಂಡ...

Monday, September 21, 2015

"ನಾನು ಅವನಲ್ಲ ಅವಳು"

ಸ್ನೇಹಿತರೆ,

ಅವಿರತವು ಇದೆ ರವಿವಾರ, ಬಿ. ಎಸ್. ಲಿಂಗದೇವರು ನಿರ್ದೇಶನದ, ರವಿ ಗರಣಿ ನಿರ್ಮಾಣದ, ಸಂಚಾರಿ ವಿಜಯ ಅಭಿನಯದ ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದ "ನಾನು ಅವನಲ್ಲ ಅವಳು" ಚಿತ್ರದ ವಿಶೇಷ ಪ್ರದರ್ಶನ ಹಾಗೂ ಚಿತ್ರ ತಂಡದೊಂದಿಗೆ ಸಂವಾದವನ್ನು ಸವಿತಾ ಚಿತ್ರಮಂದಿರದಲ್ಲಿ ಏರ್ಪಡಿಸಿದೆ.

ದಿನಾಂಕ: 27 ಸೆಪ್ಟೆಂಬರ್ 2015 ಭಾನುವಾರ

ಸಮಯ : ಮಧ್ಯಾಹ್ನ 2.30ಕ್ಕೆ
ಸ್ಥಳ : ಸವಿತಾ ಚಿತ್ರಮಂದಿರ (ಮಂತ್ರಿ ಮಾಲ್ ಪಕ್ಕ) ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು.

ಬನ್ನಿ, ನಮ್ಮ ಜೊತೆ ಸೇರಿ. ಒಂದು ಒಳ್ಳೆಯ ಚಿತ್ರವನ್ನು, ಚಿತ್ರ ತಂಡವನ್ನು ಬೆಂಬಲಿಸೋಣ..!!


Aishwarya S Murthy ಅವರ, ಅವಧಿಯಲ್ಲಿ ಪ್ರಕಟಿಸಿದ ಈ ಚಿತ್ರದ ವಿಮರ್ಶೆಯನ್ನು ನೋಡಿ.

Monday, June 1, 2015

"ಅವಿರತ ವನಮಹೋತ್ಸವ"

ಉಸಿರಾಡುವ ಗಾಳಿಗೂ ಹಸಿರಿನ ನೆರವು ಬೇಕು; ತಂಪಾಗಿರಲು ಬೇರು ಬಿಟ್ಟ ಮರಗಳ ನೆರಳಿರಬೇಕು.

ಇಂದಿನ ನಮ್ಮೆಲ್ಲರ ನಗರ ಕೇಂದ್ರಿತ ಆಡಂಬರದ ಜೀವನ ಶೈಲಿ ಮತ್ತು ನಿಸರ್ಗದ ನಿಯಮಗಳಿಗೆ ವಿರುದ್ದವಾಗಿ ನಾವು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಪ್ರಕೃತಿಯಲ್ಲಿನ ಅಸಮತೋಲನ ಹೆಚ್ಚಾಗಿದೆ. ಭೂಮಿಯ ಒಡಲನ್ನು ಬಗೆದಿರುವ ಹತೋಟಿ ತಪ್ಪಿದ ಗಣಿಗಾರಿಕೆ, ಮಿತಿ ಮೀರಿದ ವಾಹನಗಳ ಬಳಕೆ, ಕಾಡನ್ನು ಕಡಿದು ನಿರ್ಮಿಸಲಾಗುತ್ತಿರುವ ನಗರಗಳು, ಹೀಗೆ ಸುತ್ತಲೂ ಕಣ್ಣಾಡಿಸಿದರೆ ನಮಗೆ ಕಾಣುವುದು ಕೇವಲ ಕಾಂಕ್ರೀಟ್ ಕಾಡು.

ನಿಸರ್ಗದ ಜಲ ಹಾಗೂ ನೆಲದ ಒಡಲಿನಲ್ಲಿರುವ ಸಮಸ್ತ ಜೀವ ಸಂಕುಲದ ಮೇಲೆ ಪರಿಸರ ಅಸಮತೋಲದ ವ್ಯತಿರಿಕ್ತ ಪರಿಣಾಮ ಒಂದಿಲ್ಲೊಂದು ರೀತಿಯಲ್ಲಿ ಆಗುತ್ತಲೇ ಇರುತ್ತದೆ. ಈ ಪರಿಸರ ಅಸಮತೋಲನಕ್ಕೆ ಮನುಷ್ಯನ ಅವಿವೇಕದ ಹೆಜ್ಜೆಗಳೇ ಕಾರಣ, ಸೃಷ್ಟಿಯ ಜೀವಜಾಲದಲ್ಲಿ ವಿಚಾರವಂತನೆನಿಸಿಕೊಂಡ ಮನುಷ್ಯನೇ ಇವುಗಳೆಲ್ಲವನ್ನು ಉಳಿಸುವ ಹೊಣೆ ಹೊರಲೆಬೇಕಾಗಿದೆ. ತನಗೆ ಅರಿವೇ ಇಲ್ಲದಂತೆ, ತನ್ನನ್ನು ತಾನೇ ಹಿಂಸಿಸಿಕೊಳ್ಳುತ್ತಾ, ಇತರೆ ಗಿಡಮರ, ಪ್ರಾಣಿ ಪಕ್ಷಿಗಳನ್ನು ವಿನಾಶದ ಅಂಚಿಗೆ ನೂಕುತ್ತಿರುವ ಮನುಷ್ಯ ಈ ಕ್ಷಣವೇ ಎಚ್ಚೆತ್ತುಕೊಳ್ಳ ಬೇಕಾಗಿದೆ. ಇಲ್ಲದೇ ಹೋದಲ್ಲಿ ಪ್ರಕೃತಿಯಲ್ಲಿ ನಡೆಯುವ ವಿಕೋಪಗಳಿಗೆ ಮನುಷ್ಯ ಮೂಕ ಪ್ರೇಕ್ಷಕನಾಗಿ, ಜೀವ ಸಂಕುಲದ ವಿನಾಶಕ್ಕೆ ಸಾಕ್ಷಿಯಾಗಬೇಕಾಗುತ್ತದೆ.

ಈ ನಿಟ್ಟಿನಲ್ಲಿ, ’ಅವಿರತ ಪ್ರತಿಷ್ಟಾನ’ವು ಪ್ರಕೃತಿಯ ಕರೆಗೆ ಓಗೊಟ್ಟು, ಪರಿಸರ ಸಂರಕ್ಷಣೆಯ ಮಹದಾಕಾಂಕ್ಷೆಯ ಬೆನ್ನೇರಿ, ಎಳೆ ಚಿಗುರುಗಳ ಸವಾರಿ ನಡೆಸಲು, ’ವನ ಮಹೋತ್ಸವ’ ಕಾರ್ಯಕ್ರಮವನ್ನು 'Oracle' ಸಹಯೋಗದೊಂದಿಗೆ ಹಮ್ಮಿಕೊಂಡಿದೆ.

ಇದು ಒಬ್ಬರ ಯೋಚನೆಯೋ, ನೂರು ಜನರ ಆಸೆಯೋ, ಸಾವಿರ ಜನರ ಶ್ರಮವೋ; ಒಟ್ಟಿನಲ್ಲಿ ಸಾಮೂಹಿಕವಾಗಿ ನಡೆಯಲೇ ಬೇಕಾದ ಒಂದು ಹಸಿರು ಕ್ರಾಂತಿ.

ಬನ್ನಿ, ಸ್ವಾರ್ಥದಿಂದಾಲೂ ಸರಿ, ನಿಸ್ವಾರ್ಥದಿಂದಾಲೂ ಸರಿ ಈ ವನ ಮಹೋತ್ಸವದಲ್ಲಿ ಕೈ ಜೋಡಿಸಿ. ನೆನಪಿಡಿ, ಇದು ಕೇವಲ ಹಸಿರಿನ ವಿಷಯವಲ್ಲ, ನಿಮ್ಮ, ನಮ್ಮ, ಈ ಜಗತ್ತಿನ ಜೀವ ಸಂಕುಲದ ಉಸಿರಿನ ವಿಷಯ.

ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ
ದಿನಾಂಕ: 7 ಜೂನ್ 2015,
ಭಾನುವಾರ ಸಮಯ: ಬೆಳಿಗ್ಗೆ 9 ಘಂಟೆ

ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ಅವಿರತ ಪ್ರತಿಷ್ಠಾನ.