Friday, July 15, 2016

ಅವಿರತ ಉಚಿತ ನೋಟ್ ಪುಸ್ತಕ ವಿತರಣೆ: ಒಂದು ಅಳಿಲು ಸೇವೆಯ ಸುತ್ತಾ...

ಒಂದು ಅಳಿಲು ಸೇವೆಯ ಸುತ್ತಾ:
ನಗರಗಳಲ್ಲಿ ವೆಚ್ಚ ಭರಿಸಲಾಗದೆ ಶಿಕ್ಷಣ ಹೊರೆಯಾಗುತ್ತಿದ್ದರೆ, ದೂರದ ಹಳ್ಳಿಗಳಲ್ಲಿ ಬಡತನ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಿಕ್ಷಣ, ಶಾಲೆಗಳು ಮರೆಯಾಗುತ್ತಿವೆ. 
'ಪ್ರಾಥಮಿಕ ಶಿಕ್ಷಣ, ಮಕ್ಕಳ ಮೂಲಭೂತ ಹಕ್ಕು' ಎಂಬ ಕಾನೂನು ರಚಿಸಿರುವ ಭಾರತ ಸರ್ಕಾರ, ಶಿಕ್ಷಣವನ್ನು ಸರ್ವವ್ಯಾಪಿಗೊಳಿಸಲು ಹಾಗೂ ಸಾಕ್ಷರತೆಯನ್ನು ಸಾಧಿಸಲು, ಮಕ್ಕಳನ್ನು ಶಾಲೆಗೆ ಮರಳಿ ಕರೆ ತರಲು 'ಸರ್ವ ಶಿಕ್ಷಣ ಅಭಿಯಾನ', 'ಮಧ್ಯಾಹ್ನದ ಬಿಸಿಯೂಟ', 'ಅಂಗನವಾಡಿ', 'ಸೈಕಲ್ ವಿತರಣೆ' ಹೀಗೆ ಹತ್ತು ಹಲವು ಯೋಜನೆಗಳನ್ನೂ ಹಮ್ಮಿಕೊಂಡಿವೆ. ಈ ಎಲ್ಲಾ ಕಾರ್ಯಕ್ರಮ ಹಾಗೂ ಯೋಜನೆಗಳ ಹೊರತಾಗಿಯೂ, ಗ್ರಾಮೀಣ ಶಿಕ್ಷಣ ವ್ಯವಸ್ಥೆಯು ಉತ್ತಮ ಶಿಕ್ಷಕರ ಕೊರತೆ, ಪೀಠೋಪಕರಣದ ಕೊರತೆ, ಅನಾನುಕೂಲಕರವಾದ ಕಟ್ಟಡ, ತರಗತಿಗಳು, ತಂತ್ರಜ್ಞಾನದ ಕೊರತೆ, ಶೌಚಾಲಯದ ಕೊರತೆ ಹೀಗೆ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿವೆ ಮತ್ತು ಇವೇ ಸವಾಲುಗಳು ಹಲವಾರು ಮಕ್ಕಳನ್ನು ಶಾಲೆಯಿಂದ, ಶಿಕ್ಷಣದಿಂದ ದೂರಮಾಡಿದೆ. ಈ ಎಲ್ಲಾ ಸವಾಲು/ಕೊರತೆಗಳ ಕಾರಣದಿಂದ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗದಂತೆ ಮಾಡುವಲ್ಲಿ ಸರ್ಕಾರಕ್ಕಿರುವಷ್ಟೇ ಜವಾಬ್ದಾರಿ ಸರ್ಕಾರೇತರ ಸಂಸ್ಥೆಗಳಿಗೂ ಇದೆ. 
ಈ ದಿಕ್ಕಿನಲ್ಲಿ, ಗ್ರಾಮೀಣ ಶಿಕ್ಷಣ ಅಭಿವೃದ್ದಿಯನ್ನು ತನ್ನ ಕಾರ್ಯಕ್ಷೇತ್ರದ ಪ್ರಮುಖ ಅಂಶವನ್ನಾಗಿಸಿಕೊಂಡಿರುವ 'ಅವಿರತ ಪ್ರತಿಷ್ಠಾನ ' ಎಂಬ ಸರ್ಕಾರೇತರ ಸಂಸ್ಥೆ, ಸೊರಗುತ್ತಿರುವ ಗ್ರಾಮೀಣ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಭ್ಯಸಿಸಿ, ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಆಯಾಮವನ್ನೇ ಸೃಷ್ಟಿಸುವ ಪ್ರಯತ್ನದಲ್ಲಿದೆ.
ಕನ್ನಡ ನಾಡು, ನುಡಿ, ಸಂಸ್ಕೃತಿ ಯನ್ನು ಎತ್ತಿ ಹಿಡಿಯುತ್ತಾ, ಕನ್ನಡಿಗರ ಪರಿಸರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಮೌಲ್ಯಯುತ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಉತ್ಸಾಹದ ಯುವಪಡೆಯೇ ಅವಿರತ ಪ್ರತಿಷ್ಠಾನ. ೨೦೦೭ರ ಮಾರ್ಚ್ ನಲ್ಲಿ ಆರಂಭವಾದ ಅವಿರತ ಪ್ರತಿಷ್ಠಾನವು ಶಿಕ್ಷಣ, ತರಬೇತಿ, ಆರೋಗ್ಯ, ಕಲೆ-ಸಾಹಿತ್ಯ, ಮಹತ್ವ ವಿಷಯಗಳ ಚಿಂತನೆ, ವಿಚಾರ ಗೋಷ್ಠಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿಗಾಗಿ ನಿರಂತರ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ನಾಡಿನ ಸಮತೋಲನ ಅಭಿವೃದ್ದಿಗಾಗಿ ಮೌಲ್ಯಯುತ ಮತ್ತು ತರ್ಕಬದ್ದ ಸಂಘಟನೆಯಾಗಿ ಶ್ರಮಿಸುತ್ತಿರುವ ಅವಿರತ ಪ್ರತಿಷ್ಠಾನವು, ವೈದ್ಯರು, ಸಾಫ್ಟ್ ವೇರ್ ತಂತ್ರಜ್ಣರು, ಶಿಕ್ಷಕರು, ವಕೀಲರು, ಪತ್ರಕರ್ತರು, ಕಲಾವಿದರು,
ಸಾಹಿತಿಗಳನ್ನೊಳಗೊಂಡಿದ್ದು, ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.

'ಹಣತೆಯ ಅಡಿಯಲ್ಲೇ, ಕತ್ತಲೆಯ ತವರು' ಎನ್ನುವ ಕವಿವಾಣಿಯಂತೆ, ಮಹಾನಗರದ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲೇ ಬರುವ, ಇಲ್ಲೇ ಮೂಲೆಯಲ್ಲಿರುವ ಹಳ್ಳಿಯದು. ಕೆಲವು ವರ್ಷಗಳ ಹಿಂದೆ, ಕುತೂಹಲಕ್ಕಾಗಿಯೋ ಅಥವಾ ದಾರಿ ತಪ್ಪಿಯೋ ಅವಿರತದ ಕೆಲವು ಸದಸ್ಯರು ಈ ಹಳ್ಳಿಗೆ ಅಚಾನಕ್ಕಾಗಿ ಭೇಟಿ ನೀಡಿವಂತಾಯಿತು. ಅಲ್ಲಿ ಕಾಣಿಸಿಕೊಂಡ ದೃಶ್ಯಗಳು, ತಿಳಿದುಕೊಂಡ ವಿಷಯಗಳು, ಹುಟ್ಟಿಕೊಂಡ ಯೋಚನೆಗಳು ಮುಂದೆ ದೊಡ್ಡ ಯೋಜನೆಯಾಗಿ, ಅವಿರತ ತಂಡದ ವಾರ್ಷಿಕ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತದೆಯೆಂದು ಅವರಿಗಿನ್ನೂ ತಿಳಿದಿರಲಿಲ್ಲ.
ಕುಗ್ರಾಮವಲ್ಲದೇ ಇದ್ದರೂ, ಆರ್ಥಿಕವಾಗಿ ಬೆಳೆದಿಲ್ಲದ ಹಳ್ಳಿಯದು. ದಿನಗೂಲಿಯನ್ನು ನಂಬಿರುವ ಜನರಿರಬೇಕು; ಸುತ್ತಲೂ ಗುಡಿಸಲಿನ ಮನೆಗಳು, ನಡುವೆಯೊಂದು ಚೆಂದದ ಕಾಂಕ್ರೀಟ್ ಕಟ್ಟದ ಸರ್ಕಾರಿ ಶಾಲೆ. ಶಾಲೆಗೆ ಹೋಗುವ ಮಕ್ಕಳಿಗೆ ಓದುವ ಉತ್ಸಾಹವಿದ್ದರೂ, ಊಟ, ಬಟ್ಟೆ, ಪುಸ್ತಕ ಸಿಕ್ಕರೂ ಸರಿಯಾದ ಪ್ರೋತ್ಸಾಹವಿಲ್ಲದೆ ಅವರ ಶಿಕ್ಷಣಾಭ್ಯಾಸ ಸಮರ್ಪಕವಾಗಿರಲಿಲ್ಲ. ಶಾಲೆಯ ಉಪಾಧ್ಯಾಯರೊಂದಿಗೆ ಚರ್ಚಿಸಿ, ಮಕ್ಕಳೊಂದಿಗೆ ಬೆರೆತು, ಅಲ್ಲಿನ ಅವಶ್ಯಕತೆಯನ್ನು ಅರಿತ ತಂಡದ ಸದಸ್ಯರು ಮಕ್ಕಳಿಗೆ ಓದಿನ ಮಹತ್ವ ತಿಳಿಸಿ, ಎಲ್ಲಾ ಮಕ್ಕಳಿಗೆ ಸ್ಪೋರ್ಟ್ಸ್ ಕಿಟ್ ಅನ್ನು ಕೊಟ್ಟು ಓದಲು ಹುರಿದುಂಬಿಸಿ ಬಂದರು. 
ಹಿಂದುರಿಗಿ ಬಂದವರು, ತಾವು ಮಾಡಿದ ಸಹಾಯವನ್ನು ಕೊಂಡಾಡಿಕೊಂಡು, ಆ ಹಳ್ಳಿಯ, ಶಾಲೆಯ ಸ್ಥಿತಿಯನ್ನು ನೆನೆದು ಮರುಗಿ ಸುಮ್ಮನಾಗಲಿಲ್ಲ. ಮಹಾನಗರದ ಸುತ್ತಮುತ್ತ ಅಂಥದ್ದೇ ಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಗುರುತಿಸಿದರು. ಶಾಲಾ ಮುಖ್ಯಸ್ಥರೊಂದಿಗೆ ಚರ್ಚಿಸಿ ಅಲ್ಲಿನ ಅವಶ್ಯಕತೆಗಳನ್ನು, ಅಸಹಾಯಕತೆಯನ್ನು ತಿಳಿದುಕೊಂಡರು; ತಮ್ಮ ತಂಡದ ಸದಸ್ಯರ, ಅವರ ಸ್ನೇಹಿತರ, ಸಂಬಂಧಿಗಳ ತನು, ಮನ, ಧನ ಸಹಾಯದೊಂದಿಗೆ ಈ ಎಲ್ಲಾ ಶಾಲೆಗಳ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಶೈಕ್ಷಣಿಕ ವರ್ಷಕ್ಕಾಗುವಷ್ಟು ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಯೋಜನೆ ರೂಪಿಸಿದರು. 
ಹೀಗೆ, ಶಾಲೆಯೊಂದರ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಶುರುವಾದ ಸಣ್ಣ ಕೆಲಸ, ಇಂದು ದೊಡ್ಡ ಯೋಜನೆಯಾಗಿ ನೂರಾರು ಶಾಲೆಗಳನ್ನು ತಲುಪಿದೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಶಾಲೆಗೆ ಸೇರುವ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಿರುವ ಹೆಮ್ಮೆಯೂ ಈ ಯೋಜನೆಗೆ ಉಂಟು. ಅಲ್ಲದೇ, ಅವಿರತ ತಂಡವೂ ಸಹ ತನ್ನ ನಿರಂತರ ಸಕ್ರಿಯತೆಯಿಂದ ಈ ಯೋಜನೆಯ ವ್ಯಾಪ್ತಿಯನ್ನು ದೂರದ ಗಡಿ ಪ್ರದೇಶದ ಹಳ್ಳಿಗಳವರೆಗೂ, ಮಲೆನಾಡಿಗೂ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ವರೆಗೂ ವಿಸ್ತರಿಸಿಕೊಂಡಿದೆ.

ಪ್ರತಿ ತರಗತಿಯ ವಿದ್ಯಾರ್ಥಿಗೂ ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್ ಪುಸ್ತಕಗಳೆಷ್ಟು?! ಎಂಬುದನ್ನು ವೈ ಜ್ಞಾನಿಕವಾಗಿ ಅಭ್ಯಸಿಸಿ, ಅವುಗಳನ್ನು ಆಕರ್ಷಣೀಯವಾಗಿ ಮುದ್ರಿಸಿ, ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ (ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ) ವಿದ್ಯಾರ್ಥಿಗಳಿಗೆ ನೇರವಾಗಿ ತಲುಪಿಸುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಅವಿರತ ತನ್ನದಾಗಿಸಿಕೊಳ್ಳುವುದೇ ಈ ಯೋಜನೆಯ ವಿಶಿಷ್ಟತೆ ಹಾಗೂ ಯಶಸ್ವಿಗೆ ಕಾರಣವಾಗಿದೆ. ಜೊತೆಗೆ, ಹೀಗೆ ಮಾಡುವುದರಿಂದ ದಾನಿಗಳಿಗೆ ಅವಿರತದ ಕೆಲಸಗಳಲ್ಲಿ ಪಾರದರ್ಶಕತೆಯನ್ನು ಒದಗಿಸಿದಂತೆಯೂ ಆಗುತ್ತದೆ
'ನನ್ನ ಶಾಲೆ - ನನ್ನ ಹೆಮ್ಮೆ' ಎಂಬ ಚಿಂತನೆಯಡಿಯಲ್ಲಿ ಒಂದು ಶಾಲೆಯ ಉಸ್ತುವಾರಿ ವಹಿಸಿಕೊಂಡ ಸದಸ್ಯರ ಉಪತಂಡವು, ಪುಸ್ತಕ ವಿತರಣೆಗೆ ಬೇಕಾದ ಖರ್ಚು-ವೆಚ್ಚಗಳನ್ನು ಸ್ವತಂತ್ರವಾಗಿ ಕ್ರೋಢೀಕರಿಸಿತ್ತದೆ. ಹೀಗೆ ಮಾಡುವುದರಿಂದ ಒಂದು ಶಾಲೆಯ ಸಂಪೂರ್ಣ ಜವಾಬ್ದಾರಿ ಆ ತಂಡದ್ದಾಗುತ್ತದೆ ಹಾಗೂ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡು ಕಾರ್ಯಕ್ರಮ ಪರಿಣಾಮಕಾರಿಯಾಗಿದೆ
ಈ ಕಾರ್ಯಕ್ರಮದ ಪರಿಣಾಮ ತಿಳಿದುಕೊಳ್ಳುವುದಕ್ಕೆ, 2016 ರ ನೋಟ್ ಪುಸ್ತಕ ವಿತರಣೆಯ ಅಂಕಿ ಅಂಶಗಳನ್ನು ಗಮನಿಸಿದರೆ ಸಾಕು.
ಯೋಜನಯ ವಿಸ್ತಾರ:
-178 ಶಾಲೆಗಳು
-17 ಜಿಲ್ಲೆಗಳು
-53 ತಾಲ್ಲೂಕುಗಳು
-161 ಹಳ್ಳಿಗಳು
ಯೋಜನಯ ಒಟ್ಟು ವೆಚ್ಚ – 15,00,000 (ಹದಿನೈದು ಲಕ್ಷ)
ಒಟ್ಟು 318 ಸ್ವಯಂ ಸೇವಕರು, 61 ತಂಡಗಳು ರಚಿಸಿಕೊಂಡು ಸುಮಾರು 61 ದಿನಗಳ ಕಾಲ, 132 ವಾಹನಗಳಲ್ಲಿ ಪ್ರತಿ ವಾರಂತ್ಯದಲ್ಲಿ, ಬೆಂಗಳೂರಿನಿಂದ ಒಟ್ಟು 1,20,000 ನೋಟ್ ಪುಸ್ತಕಗಳನ್ನು 178 ಶಾಲೆಗಳ ಸುಮಾರು 18,000 ವಿದ್ಯಾರ್ಥಿಗಳಿಗೆ ತಲುಪಿಸಿದ್ದಾರೆ.


ಶಿಕ್ಷಣ, ಕಲೆ, ಸಂಸ್ಕೃತಿ, ಆರೋಗ್ಯ,ಪರಿಸರ ಕ್ಷೇತ್ರಗಳಲ್ಲಿ ನಾಡಿಗಾಗಿ ಏನಾದರೂ ಮಾಡಬೇಕು ಎಂದು ಕನವರಿಸುವ ಜನಕ್ಕೆ, ತುಡಿಯುವ ಮನಕ್ಕೆ ಅವಿರತ ಪ್ರತಿಷ್ಠಾನ ಸೂಕ್ತವಾದ ಸಂಸ್ಥೆ / ತಂಡ.

ಕೇವಲ ಹಣವನ್ನು ಕೊಟ್ಟು, ಕೆಲಸವನ್ನು ಬೇರೊಬ್ಬರಿಗೆ ವಹಿಸಿವುದಕ್ಕೂ ಮೀರಿದ ಆಕರ್ಷಣೆ, ಅರ್ಪಣೆಯನ್ನು ಅವಿರತದ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ. ಕೈಗೊಳ್ಳುವ ಯಾವುದೇ ಕೆಲಸವನ್ನು ಕಾಳಜಿಯಿಂದ ಎದೆಗವುಚಿಕೊಂಡು ಮಾಡುವ ಅವಿರತ, ಸಾಧನೆ ಮಾಡಿರುವವರಿಂದ ಪ್ರೇರಣೆ ಪಡೆದಿರುವ ತಂಡ; ಸಾಧನೆಗೆ ಮಿತಿಯಿಲ್ಲ ಎಂಬುದನ್ನು ಅರಿತಿರುವ ತಂಡ.
ತಾನು ನಂಬಿರುವುದೇ ಸತ್ಯವೆಂದು ತಿಳಿಯದ ಅವಿರತ ಪ್ರತಿಷ್ಠಾನ ತಾನು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಆಗಾಗ ಪರಿಶೀಲನೆಗೊಳಪಡಿಸಿ, ಹಿರಿಯರ ನಿರ್ದೇಶನವನ್ನು, ಕಿರಿಯರ ಸಲಹೆಗಳನ್ನೂ ಪರಿಗಣಿಸಿ, ಕಾಲ ಕಾಲಕ್ಕೆ ತನ್ನ ಯೋಜನೆಗಳನ್ನು,ಕಾರ್ಯಕ್ರಮಗಳನ್ನು ಪರಿಷ್ಕರಿಸುತ್ತಿರುವುದರಿಂದಲೇ ಅಲ್ಲಿ ಸದಾ ಹೊಸಹುಮ್ಮಸ್ಸು, ಲವಲವಿಕೆ, ಚೈತನ್ಯ ಮೂಡಿರುತ್ತದೆ. ಈ ಶಕ್ತಿ, ಸಾಮರ್ಥ್ಯವು ತಂಡದಲ್ಲಿ ಸದಾ ಜೀವನದಿಯಂತೆ ಹರಿಯುತಿರಲಿ, ಅದರ ಫಲ ನಿರಂತರವಾಗಿ ನಾಡಿಗೆ ದೊರೆಯುವಂತಾಗಲಿ…

ನೋಟ್ ಪುಸ್ತಕ ವಿತರಣೆಯ ಛಾಯಾಚಿತ್ರಕ್ಕಾಗಿ ಕೆಳಗಿನ ಕೊಂಡಿ ನೋಡಿ.

Friday, May 20, 2016

ನನ್ನ ಶಾಲೆ ನನ್ನ ಹೆಮ್ಮೆ...

ಸ್ನೇಹಿತರೆ,

ಮರಳಿ ಗೂಡಿಗೆ ಎನ್ನುವುದು ಅವಿರತಕ್ಕೆ "ಮರಳಿ ಶಾಲೆಗೆ". ಜೂನ್-ಜುಲೈ ತಿಂಗಳು ಬಂದರೆ ಸಾಕು ಅವಿರತಕ್ಕೆ ಅದು ಸುಗ್ಗಿಯ ಕಾಲ. ಹೌದು, ಮಹಾ ಸುಗ್ಗಿಯೇ. ಮಕ್ಕಳು ತಿರುಗಿ ಶಾಲೆಗೆ ಬರುವ ಸಮಯ. ಸಾವಿರಾರು ಮಕ್ಕಳ್ಕ ನಿರೀಕ್ಷೆಗೆ ಪೂರ್ಣ ವಿರಾಮವಿಡುವ, ಕನಸುಗಳಿಗೆ ಬಣ್ಣ ಹಚ್ಚುವ, ನಗುವಿಗೆ ಮಿಂಚು ತುಂಬುವ ಮತ್ತು ಕಲಿಕೆಗೆ ಉತ್ಸಾಹದ ಕೈ ಚಾಚುವ ಅರ್ಥಪೂರ್ಣ ಕೆಲಸವನ್ನು ಅವಿರತವು ಕಳೆದ ೮ ವರುಷಗಳಿಂದ ಮಾಡುತ್ತಾ ಬಂದಿದೆ.

ಶಿಕ್ಷಣವು ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲೊಂದು. ಪ್ರತಿವರ್ಷ ಸರಕಾರಿ ಶಾಲೆಯ, ಅತಿ ಹೆಚ್ಚಾಗಿ ಹಳ್ಳಿಯ ಮಕ್ಕಳಿಗೆ ಆಯಾ ಶೈಕ್ಷಣಿಕ ವರ್ಷಕ್ಕೆ ಸಾಕಾಗುವಷ್ಟು ನೋಟ್ ಪುಸ್ತಕಗಳನ್ನು "ನನ್ನ ಶಾಲೆ ನನ್ನ ಹೆಮ್ಮೆ" ಎಂಬ ಯೋಜನೆಯಲ್ಲಿತಪ್ಪದೇ ವಿತರಿಸುತ್ತಾ ಹೆಜ್ಜೆ ಹಾಕುತ್ತಿದೆ. ಆರ್ಥಿಕವಾಗಿ ಕಷ್ಟಪಡುತ್ತಿರುವ ನಮ್ಮವರಿಗೆ ಒಂದು ಚಿಕ್ಕ ಸಹಾಯ, ಮಕ್ಕಳನ್ನು ಮತ್ತೆ ಶಾಲೆಯೆಡೆಗೆ ಮುಖಮಾಡಿಸುವ ಚಿಕ್ಕ ಯತ್ನ ಹಾಗೂ ಶಿಕ್ಷಣವನ್ನು ಬೆಂಬಲಿಸುವ ಕಿರು ಆಸೆ, ನಮ್ಮ ಅವಿರತಕ್ಕೆ.

ನೀವೂ ನಮ್ಮ ಕೈ ಜೋಡಿಸಿ, ನಮ್ಮಿಂದ ನಮ್ಮವರಿಗಾಗಿ ಒಂದು ಚಿಕ್ಕ ನೆರವಿಗಾಗಿ. ಮಾಹಿತಿಗಾಗಿ ಅವಿರತದ ಯಾವುದೇ ಸದಸ್ಯರನ್ನು ಸಂಪರ್ಕಿಸಿ.

ಬನ್ನಿ, ಸಂತಸವನ್ನು ಹಂಚೋಣ.. 

ಅವಿರತ ಪ್ರತಿಷ್ಟಾನ.

Thursday, May 12, 2016

"ತಿಥಿ" ಚಿತ್ರ ಪ್ರದರ್ಶನ ಮತ್ತು ಸಂವಾದ

ಸ್ನೇಹಿತರೆ... 

ಈ ವರ್ಷಕ್ಕೆ, ಅವಿರತದ ಮತ್ತೊಂದು ಪ್ರಯತ್ನ: " ತಿಥಿ " ಚಿತ್ರ ಪ್ರದರ್ಶನ.

ಅವಿರತವು ಮೊದಲಿನಿಂದಲೂ ಸದಭಿರುಚಿಯ, ಕಲಾತ್ಮಕ ಚಲನಚಿತ್ರಗಳನ್ನು ಬೆಂಬಲಿಸಿ, ವಿಶೇಷ ಪ್ರದರ್ಶನ ಮತ್ತು ತಂಡದೊಂದಿಗ ಸಂವಾದವನ್ನು ಏರ್ಪಡಿಸುತ್ತಾ ಬಂದಿದೆ. ಈಗ, 9 ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಪ್ರಶಂಸಿತ "ತಿಥಿ" ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ತಿಂಗಳ 15 ರಂದು ಹಮ್ಮಿಕೊಂಡಿದ್ದೆವೆ. 

ಉತ್ತಮ ಚಿತ್ರ & ಪ್ರಯತ್ನವನ್ನು ಬೆಂಬಲಿಸುವ, 
ಸೆಂಚುರಿ ಗೌಡ ಗಡ್ಡದಪ್ಪ ನನ್ನು ಭೇಟಿ ಮಾಡಿ ಮಾತಾಡುವ ಸದಾವಕಾಶ. 

ಬನ್ನಿ, ಒಟ್ಟಿಗೆ ಚಿತ್ರ ನೋಡೋಣ..!



'ರಾಜ್ ರಾಗ' : ಕಾರ್ಯಕ್ರಮದ ಅನಿಸಿಕೆ-ರವಿಕುಮಾರ

"ಡಾ|| ರಾಜ್ ಕುಮಾರ್", ರಾಜ್ ಒಬ್ಬ ಅದ್ಬುತ ನಟ. ಅವರು ಅಷ್ಟೇ ಆಗಿದ್ದರೆ ಇಂದು ಆ ಹೆಸರು ಕೇಳಿದಾಗ ಆಗುವ ಪುಳಕ ಬಹುಶಃ ಆಗುತ್ತಿರಲಿಲ್ಲವೇನೋ. ರಾಜ್ ನಟನಾಗಿಯೇ ನಟನೆಗೆ ಮೀರಿ ಬೆಳೆದವರು. ಪಾತ್ರಗಳಾಗಿದ್ದುಕೊಂಡೇ ಪಾತ್ರಗಳಿಗೂ ಮೀರಿ ಅರ್ಥ ಕೊಟ್ಟವರು. ಮುಗ್ದತೆ ತೋರುತ್ತಲೇ ವಿಶ್ವಮಾನವರಾಗಿದ್ದವರು. ಕನ್ನಡಿಗ ಎಂದರೆ ಆವ ಹೇಗಿದ್ದಾನೆ ಎಂಬುದಕ್ಕೆ ರಾಜ್ ಅಪ್ಪಟ ಉದಾಹರಣೆ. ಹಾಗಾಗಿ ನಮ್ಮೆಲ್ಲಾ ಸಂಸ್ಕೃತಿಯನ್ನು ಮೈದಳೆದಂತೆ ಕನ್ನಡಿಗರಿಗೆ ಒಂದು ಸ್ವಾಭಿಮಾನದ, ಹೆಮ್ಮೆಯ 'ಐಡೆಂಟಿಟೀ' ಕೊಟ್ಟವರು ರಾಜ್. ಒಮ್ಮೆ ಕುವೆಂಪು ಅವರೇ ಹೇಳಿದಂತೆ ವಿಶ್ವ ಮಾನವ ಸಂದೇಶ ಹರಡಬಲ್ಲ ಚೇತನ ರಾಜ್ ರಿಗೆ ಇತ್ತು. ಬಹುಶಃ ಇಂದಿಗೆ ಇದು ಕೇವಲ ಹೊಗಳಿಕೆಯ ಮಾತಾಗುತ್ತಿತ್ತೇನೋ; ಅಂದು ಒಂದು ಗೋಕಾಕ್ ಚಳುವಳಿ ಆ ರೂಪ ತಾಳದಿದ್ದರೆ. ಆದರೆ ಹಾಗಿಲ್ಲ. ಕನ್ನಡಿಗರ ವಿವಿಧ ಬೇಡಿಕೆಗಳಿಗಾಗಿ ರೂಪುಗೊಂಡ ಚಳುವಳಿ ಇನ್ನೇನು ನೆಲಕಚ್ಚಿತು ಎನ್ನುವಾಗ ರಾಜ್ ಬಂದರು, ಚಳುವಳಿಯ ಮುಂದಾಳತ್ವ ವಹಿದರು, ಮುಂಚೂಣಿಯಲ್ಲಿದ್ದವರು ಕಲ್ಲುಬಂಡೆಯಂತೆ ಅವರ ಬೆನ್ನಿಗೆ ನಿಂತರು. ಕನ್ನಡಿಗರು ಒಗ್ಗೂಡಿ ನಿಂತರೆ ಏನನ್ನಾದರೂ ಸಾಧಿಸಬಲ್ಲರು ಎಂಬುದು ಸಾಬೀತಾಯಿತು. ಹಾಗಾಗಲು ಆ ಏಕತೆ ಮೂಡಲು ಒಂದು ದೊಡ್ಡ ಶಕ್ತಿಯ ಅವಶ್ಯಕತೆ ಇತ್ತು. ಆ ಶಕ್ತಿಯೇ ರಾಜ್. ಪ್ರಪಂಚದ ಪ್ರತಿ ಸಂಸ್ಕೃತಿ, ಜನಸಮುದಾಯ ಒಬ್ಬ ಸಾಂಸ್ಕೃತಿಕ ನಾಯಕನನ್ನು ಬಯಸುತ್ತದೆ, ಸೃಷ್ಟಿಸುತ್ತದೆ ಮತ್ತು ಮೆರೆಸುತ್ತದೆ. ಕನ್ನಡಿಗರ ಪಾಲಿನ ಆ ನಾಯಕ ರಾಜ್ ಆಗಿದ್ದರು. ಹೇಳುತ್ತಾ ಹೋದರೆ ಪುಟ ಸಾಲದು. ಅಂತ ಮಾಹಾನ್ ಶಕ್ತಿಯನ್ನು ಮತ್ತೊಮ್ಮೆ ಮಗದೊಮ್ಮೆ ನೆನೆಯಬೇಕೆನಿಸುತ್ತದೆ.

ಹೇಗೆ??

ಉತ್ತರ ಕೊಟ್ಟವರು ಅವಿರತ ತಂಡ. ಎಷ್ಟು ನೆನೆದರೂ ನಿಲ್ಲದ ರಾಜ್ ನೆನೆಪುಗಳಿಗೆ ಹಾತೊರೆಯುವವರಿಗೆ ಅವರ ಹುಟ್ಟುಹಬ್ಬದಂದೇ ಅವರ ಬೃಹತ್ ಲೋಕದ ಒಳಗೆ ಕರೆದುಕೊಂಡು ಹೋದದ್ದು ಅವಿರತ ತಂಡ. ಅವಿರತ ಭ್ರಮೆ ತಂಡದೊಂದಿಗೆ ಕೈಗೂಡಿ ಹಮ್ಮಿಕೊಂಡ 'ರಾಜ್ ರಾಗ' ಒಂದು ವಿನೂತನ ವಿಶಿಷ್ಟ ಪ್ರಯತ್ನ. ರಾಜ್ ರ ಎಲ್ಲಾ ಬಗೆಯ ರಾಗಗಳ ಪರಿಚಯ 'ಮೇದ್ಲ್ೈ'ಗಳ ಮೂಲಕ ಆದರೆ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳ ಪ್ರಸ್ತಾಪ ಆ ರಾಗಗಳ ರಂಗೇರಿಸಿತ್ತು. ರಾಜ್ ರೆ ಮೈವೆತ್ತಿಬಂದತೆ ಆ ಘಟನೆಗಳನ್ನು ನಿರೂಪಿಸಿದ ನಿರೂಪಕ ರೋಹಿತ್ ರೋಹಿತ್ ಸ್ ಹರಿಪ್ರಸಾದ್ ಮಾತುಗಳು ಎಷ್ಟು ಕೆಳಿದಾರೂ ಸಾಲದಾಗಿತ್ತು. ಹಾಡುಗಳ ಸನ್ನಿವೇಶ ಸೃಷ್ಟಿಸಿ ಹಾಡಿ ರಂಜಿಸಿದ್ದು ವಿನೂತನವಾಗಿದ್ದರೆ, ನಾದಮಯ ಹಾಡಿಗೆ ಕೇಳುಗರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಭ್ರಮೆ ತಂಡದ ಹಾಡುಗಾರಿಕೆಗೆ ಕೊಟ್ಟ ಮೆಚ್ಚುಗೆಯಾಯ್ತು. ರಾಜ್ ರ ಮಾತುಗಳನ್ನು ಕೇಳಬೇಕೆನಿಸಿದವರಿಗೆ ನೆರವಾದದ್ದು ರಾಜ್ ಶಾರೀರ ಹೋಲುವ ಜಗದೀಶ್. ರಾಜ್ ರ ಹಿರಣ್ಯಕಷ್ಯಪುವಿನ ಪಾತ್ರ ತೊಟ್ಟ ಆರ್ಭಟಿಸಿದರು. ರಾಜ್ ಧರಿಸಿ ಮೆರೆಸಿದ ಶ್ರೀಕೃಷ್ಣ ದೇವರಾಯ (ರವಿ ಕುಲ್ಕರ್ಣೀ), ರಣಧೀರ ಕಂಠೀರವ (ಸೋಮ), ರಾಘವೇಂದ್ರ ಸ್ವಾಮಿ(ರವೀಂದ್ರ), ಒಂದು ಮುತ್ತಿನ ಕಥೆಯ ಐತ(ವೆಂಕಟ್), ಶಂಕರ್ ಗುರು( ಗುರು ಬಾ), ಬಂಗಾರದ ಮಾನುಷ್ಯದ ರಾಜಪ್ಪ (ಶಿವಲಿಂಗೆ ಗೌಡ) ,ಗಂಧದ ಗುಡಿಯ ಕುಮಾರ್ (ಸಿಯ ) ಸನಾದಿ ಅಪ್ಪಣ್ಣ (ರವಿ ಕುಮಾರ್) ಪಾತ್ರಗಳೇ ಇಂದು ಅವರರನ್ನ ಡೋಲಿಯಲ್ಲಿ ತಂದು ಮೆರೆಸಿದರು. ಕಸ್ತೂರಿ ನಿವಾಸದಲ್ಲಿ ರಾಜ್ ಜೊತೆಗಿದ್ದ ಮಗುವಿನಂತೆ ಮುದ್ದಾದ ಮನ್ವಿತ ಆಡಿಸಿ ನೋಡು ಬೀಳಿಸಿ ನೋಡು ಹಾಡಿಗೆ ಜೀವ ಕೊಟ್ಟಳು. ಇಷ್ಟೆಲ್ಲಾ ಆಗಬೇಕಿದ್ದರೆ ರಾಜ್ ನಮ್ಮೊಂದಿಗಿದ್ದರೆ ಎಷ್ಟು ಚಂದ ಅನ್ನಿಸುವ ಹೊತ್ತಿಗೆ ರಾಜ್ ದ್ವನಿಯೊಂದಿಗೆ ಸಂವಾದ. ರಾಜ್ ರ ಸುಮಾರು ೨೨ ಚಿತ್ರಗಳಿಗೆ ಸಂಗೀತ ಕೊಟ್ಟ ರಾಜನ್, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಶಿವರಾಂ ಸರ್ ನಮ್ಮೊಂದಿಗಿದ್ದು ಕಾರ್ಯಕ್ರಮದ ಸಂತಸ ಹೆಚ್ಚಿಸಿದರು. ವರ್ಣಿಸ ಹೊರಟರೆ ಕಮ್ಮಿ ಎನಿಸುತ್ತದೆ. ಇಲ್ಲಿಗೆ ನಿಲ್ಲಿಸುತ್ತೇನೆ. ಒಂದು ಧೀರ್ಘ ಉಸಿರೆಳೆದು ಮತ್ತೊಮ್ಮೆ ಕಾರ್ಯಕ್ರಮ ನೆನೆಯುತ್ತೇನೆ.
  


ಕಾರ್ಯಕ್ರಮಕ್ಕೆ ದುಡಿದ ಮಧು, ಶಶಿ ರಾಜ ಶಶಿಧರ್, ಜ್ಯೋತಿ,ರವಿಂದ್ರ,ರವಿ ಕುಲಕರ್ಣಿ, ಪ್ರಸನ್ನ ಲಕ್ಷ್ಮೀಪುರ, ಪ್ರಸನ್ನ ಲಕ್ಷ್ಮೀಪುರದೀಪಕ್ ದೀಪಕ್ ಪೀ, ಶ್ರೀಕಾಂತ್, ಕಾರ್ತಿಕ್ ಬೇಲೂರ್, ಕಿರಣ್, ಅನಿಲ್, ರಘು , ಶರತ್ ಗೌಡ, ಗುರು ಬಾ, ಹರೀಶ್,ಸಿಯ, ಮುನಿರಾಜ್, ಶಿವಲಿಂಗೇಗೌಡ, ನಂದಿನಿ, ಸುಶ್ಮ, ಪ್ರತಿಭಾ ಗೌಡ, ಶ್ರಾವಂತಿ, ವರ್ಷ, ಇಲ್ಲಿ ಹೆಸರಿಸಲೇಬೇಕಾದ ಆದರೆ ಹೆಸರು ತಪ್ಪಿರುವ ಹಲವರಿಗೆ, ಪೋಸ್ಟರ್ ವಿನ್ಯಾಸಗೊಳಿಸಿದ ನಾಗರಾಜ್ ಅವರಿಗೆ, ಪ್ರಸಾಧನ ವಿಜಯ್ ಅವರಿಗೆ, ಭ್ರಮೆ ತಂಡಕ್ಕೆ, ಕಾರ್ಯಕ್ರಮದ ಎಲ್ಲಾ ಸಹ ಆಯೋಜಕರಿಗೆ, ಸೂತ್ರದಾರ ಸತೀಶ ಸತೀಶ್ ಅವಿರತ ರವರಿಗೆ, ಕೊನೆಯದಾಗಿ ನಾಡನ್ನು ಸಂಭ್ರಮಿಸುವ, ನಾಡು ನುಡಿ, ಸಂಸ್ಕೃತಿಯ ಬಗ್ಗೆ ಅವಿರತವಾಗಿ ಸಂತಸದಿಂದ ದುಡಿಯುವ, ಅವಿರತಕ್ಕೆ ಒಂದು ದೊಡ್ಡ ಪ್ರಣಾಮ.