Sunday, July 28, 2013

ಶೈಕ್ಷಣಿಕ ಜೀವನದಿಂದ ವೃತ್ತಿ ಜೀವನದೆಡೆಗೆ - ಒಂದು ಕಾರ್ಯಾಗಾರ

ಆತ್ಮೀಯರೆ,

ಅವಿರತ ಇತರೇ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು ಅನ್ನುವುದು ಅನೇಕ ಸದಸ್ಯರ ಅಭಿಮತ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ- ಪದವಿ ವಿದ್ಯಾರ್ಥಿಗಳಿಗೆಂದೇ ರೂಪಿಸಿದ್ದ ಒಂದು ಕಾರ್ಯಾಗಾರ.

ಕಾರ್ಯಕ್ರಮದ ರೂವಾರಿ ನೆಚ್ಚಿನ ಕತೆಗಾರ ಹಾಗೂ ಅವಿರತ ಸದಸ್ಯ ವಸುಧೇಂದ್ರ. ಇವರು ಸುರತ್ಕಲ್ ಆರ್.ಇ.ಸಿ ಯಲ್ಲಿ ಇಂಜಿನಿಯರಿಂಗ್  ಪದವಿಯಲ್ಲಿ  ಮೊದಲನೇ ರ‍್ಯಾಂಕ್ ಗಳಿಸಿ ನಂತರ ಬೆಂಗಳೂರಿನ ಖ್ಯಾತ ಭಾರತೀಯ ವಿಜ್ಞಾನ ಮಂದಿರದಲ್ಲಿ ಎಮ್.ಟೆಕ್ ಪದವಿಯನ್ನು ಗಳಿಸಿ, ಸಾಫ್ಟ್ ವೇರ್ ಕ್ಷೇತ್ರದಲ್ಲಿ ವೈಸ್ ಪ್ರೆಸಿಡೆಂಟ್ ಸ್ಥಾನಕ್ಕೇರಿ, ಈಗ ವಿದ್ಯಾರ್ಥಿಗಳ ತರಬೇತಿ, ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಾರ್ಯಾಗಾರದ ಉದ್ದೇಶ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದಿಂದ ವೃತ್ತಿ ಜೀವನದೆಡೆಗೆ ತಿಳುವಳಿಕೆ,  ತಾವು ಅಭ್ಯಸಿಸುತ್ತಿರುವ ವಿಷಯಕ್ಕೂ ಅದರ ಬಳಕೆಗೂ ನಡುವೆ ಇರುವ ಅಂತರ, ವೃತ್ತಿ ಕ್ಷೇತ್ರದಲ್ಲಿರುವ ಸವಾಲುಗಳು, ವಿದ್ಯಾರ್ಥಿ ದಿಸೆಯಲ್ಲಿಯೇ ಮುಂದಿನ ಜೀವನಕ್ಕೆ ಬೇಕಾಗಿರುವ ತಯಾರಿ, ಸೂಕ್ತ ಮನಸ್ಥಿತಿ ಇನ್ನಿತರೇ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಕರ ರೀತಿಯಲ್ಲಿ ವಸುಧೇಂದ್ರ ಅವರು ತಿಳಿಸಿಕೊಟ್ಟರು.

೪೦ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸುವ ಅವಕಾಶವಿತ್ತು. ಯಾವುದೇ ಪದವಿ ಶಿಕ್ಷಣ ಪಡೆಯುತ್ತಿರುವ ೧೮-೨೦ ರ ವಯೋಮಾನದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಈ ಕಾರ್ಯಾಗಾರ ಸೂಕ್ತವಾಗಿತ್ತು.