Friday, May 20, 2016

ನನ್ನ ಶಾಲೆ ನನ್ನ ಹೆಮ್ಮೆ...

ಸ್ನೇಹಿತರೆ,

ಮರಳಿ ಗೂಡಿಗೆ ಎನ್ನುವುದು ಅವಿರತಕ್ಕೆ "ಮರಳಿ ಶಾಲೆಗೆ". ಜೂನ್-ಜುಲೈ ತಿಂಗಳು ಬಂದರೆ ಸಾಕು ಅವಿರತಕ್ಕೆ ಅದು ಸುಗ್ಗಿಯ ಕಾಲ. ಹೌದು, ಮಹಾ ಸುಗ್ಗಿಯೇ. ಮಕ್ಕಳು ತಿರುಗಿ ಶಾಲೆಗೆ ಬರುವ ಸಮಯ. ಸಾವಿರಾರು ಮಕ್ಕಳ್ಕ ನಿರೀಕ್ಷೆಗೆ ಪೂರ್ಣ ವಿರಾಮವಿಡುವ, ಕನಸುಗಳಿಗೆ ಬಣ್ಣ ಹಚ್ಚುವ, ನಗುವಿಗೆ ಮಿಂಚು ತುಂಬುವ ಮತ್ತು ಕಲಿಕೆಗೆ ಉತ್ಸಾಹದ ಕೈ ಚಾಚುವ ಅರ್ಥಪೂರ್ಣ ಕೆಲಸವನ್ನು ಅವಿರತವು ಕಳೆದ ೮ ವರುಷಗಳಿಂದ ಮಾಡುತ್ತಾ ಬಂದಿದೆ.

ಶಿಕ್ಷಣವು ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲೊಂದು. ಪ್ರತಿವರ್ಷ ಸರಕಾರಿ ಶಾಲೆಯ, ಅತಿ ಹೆಚ್ಚಾಗಿ ಹಳ್ಳಿಯ ಮಕ್ಕಳಿಗೆ ಆಯಾ ಶೈಕ್ಷಣಿಕ ವರ್ಷಕ್ಕೆ ಸಾಕಾಗುವಷ್ಟು ನೋಟ್ ಪುಸ್ತಕಗಳನ್ನು "ನನ್ನ ಶಾಲೆ ನನ್ನ ಹೆಮ್ಮೆ" ಎಂಬ ಯೋಜನೆಯಲ್ಲಿತಪ್ಪದೇ ವಿತರಿಸುತ್ತಾ ಹೆಜ್ಜೆ ಹಾಕುತ್ತಿದೆ. ಆರ್ಥಿಕವಾಗಿ ಕಷ್ಟಪಡುತ್ತಿರುವ ನಮ್ಮವರಿಗೆ ಒಂದು ಚಿಕ್ಕ ಸಹಾಯ, ಮಕ್ಕಳನ್ನು ಮತ್ತೆ ಶಾಲೆಯೆಡೆಗೆ ಮುಖಮಾಡಿಸುವ ಚಿಕ್ಕ ಯತ್ನ ಹಾಗೂ ಶಿಕ್ಷಣವನ್ನು ಬೆಂಬಲಿಸುವ ಕಿರು ಆಸೆ, ನಮ್ಮ ಅವಿರತಕ್ಕೆ.

ನೀವೂ ನಮ್ಮ ಕೈ ಜೋಡಿಸಿ, ನಮ್ಮಿಂದ ನಮ್ಮವರಿಗಾಗಿ ಒಂದು ಚಿಕ್ಕ ನೆರವಿಗಾಗಿ. ಮಾಹಿತಿಗಾಗಿ ಅವಿರತದ ಯಾವುದೇ ಸದಸ್ಯರನ್ನು ಸಂಪರ್ಕಿಸಿ.

ಬನ್ನಿ, ಸಂತಸವನ್ನು ಹಂಚೋಣ.. 

ಅವಿರತ ಪ್ರತಿಷ್ಟಾನ.

Thursday, May 12, 2016

"ತಿಥಿ" ಚಿತ್ರ ಪ್ರದರ್ಶನ ಮತ್ತು ಸಂವಾದ

ಸ್ನೇಹಿತರೆ... 

ಈ ವರ್ಷಕ್ಕೆ, ಅವಿರತದ ಮತ್ತೊಂದು ಪ್ರಯತ್ನ: " ತಿಥಿ " ಚಿತ್ರ ಪ್ರದರ್ಶನ.

ಅವಿರತವು ಮೊದಲಿನಿಂದಲೂ ಸದಭಿರುಚಿಯ, ಕಲಾತ್ಮಕ ಚಲನಚಿತ್ರಗಳನ್ನು ಬೆಂಬಲಿಸಿ, ವಿಶೇಷ ಪ್ರದರ್ಶನ ಮತ್ತು ತಂಡದೊಂದಿಗ ಸಂವಾದವನ್ನು ಏರ್ಪಡಿಸುತ್ತಾ ಬಂದಿದೆ. ಈಗ, 9 ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಪ್ರಶಂಸಿತ "ತಿಥಿ" ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ ತಿಂಗಳ 15 ರಂದು ಹಮ್ಮಿಕೊಂಡಿದ್ದೆವೆ. 

ಉತ್ತಮ ಚಿತ್ರ & ಪ್ರಯತ್ನವನ್ನು ಬೆಂಬಲಿಸುವ, 
ಸೆಂಚುರಿ ಗೌಡ ಗಡ್ಡದಪ್ಪ ನನ್ನು ಭೇಟಿ ಮಾಡಿ ಮಾತಾಡುವ ಸದಾವಕಾಶ. 

ಬನ್ನಿ, ಒಟ್ಟಿಗೆ ಚಿತ್ರ ನೋಡೋಣ..!



'ರಾಜ್ ರಾಗ' : ಕಾರ್ಯಕ್ರಮದ ಅನಿಸಿಕೆ-ರವಿಕುಮಾರ

"ಡಾ|| ರಾಜ್ ಕುಮಾರ್", ರಾಜ್ ಒಬ್ಬ ಅದ್ಬುತ ನಟ. ಅವರು ಅಷ್ಟೇ ಆಗಿದ್ದರೆ ಇಂದು ಆ ಹೆಸರು ಕೇಳಿದಾಗ ಆಗುವ ಪುಳಕ ಬಹುಶಃ ಆಗುತ್ತಿರಲಿಲ್ಲವೇನೋ. ರಾಜ್ ನಟನಾಗಿಯೇ ನಟನೆಗೆ ಮೀರಿ ಬೆಳೆದವರು. ಪಾತ್ರಗಳಾಗಿದ್ದುಕೊಂಡೇ ಪಾತ್ರಗಳಿಗೂ ಮೀರಿ ಅರ್ಥ ಕೊಟ್ಟವರು. ಮುಗ್ದತೆ ತೋರುತ್ತಲೇ ವಿಶ್ವಮಾನವರಾಗಿದ್ದವರು. ಕನ್ನಡಿಗ ಎಂದರೆ ಆವ ಹೇಗಿದ್ದಾನೆ ಎಂಬುದಕ್ಕೆ ರಾಜ್ ಅಪ್ಪಟ ಉದಾಹರಣೆ. ಹಾಗಾಗಿ ನಮ್ಮೆಲ್ಲಾ ಸಂಸ್ಕೃತಿಯನ್ನು ಮೈದಳೆದಂತೆ ಕನ್ನಡಿಗರಿಗೆ ಒಂದು ಸ್ವಾಭಿಮಾನದ, ಹೆಮ್ಮೆಯ 'ಐಡೆಂಟಿಟೀ' ಕೊಟ್ಟವರು ರಾಜ್. ಒಮ್ಮೆ ಕುವೆಂಪು ಅವರೇ ಹೇಳಿದಂತೆ ವಿಶ್ವ ಮಾನವ ಸಂದೇಶ ಹರಡಬಲ್ಲ ಚೇತನ ರಾಜ್ ರಿಗೆ ಇತ್ತು. ಬಹುಶಃ ಇಂದಿಗೆ ಇದು ಕೇವಲ ಹೊಗಳಿಕೆಯ ಮಾತಾಗುತ್ತಿತ್ತೇನೋ; ಅಂದು ಒಂದು ಗೋಕಾಕ್ ಚಳುವಳಿ ಆ ರೂಪ ತಾಳದಿದ್ದರೆ. ಆದರೆ ಹಾಗಿಲ್ಲ. ಕನ್ನಡಿಗರ ವಿವಿಧ ಬೇಡಿಕೆಗಳಿಗಾಗಿ ರೂಪುಗೊಂಡ ಚಳುವಳಿ ಇನ್ನೇನು ನೆಲಕಚ್ಚಿತು ಎನ್ನುವಾಗ ರಾಜ್ ಬಂದರು, ಚಳುವಳಿಯ ಮುಂದಾಳತ್ವ ವಹಿದರು, ಮುಂಚೂಣಿಯಲ್ಲಿದ್ದವರು ಕಲ್ಲುಬಂಡೆಯಂತೆ ಅವರ ಬೆನ್ನಿಗೆ ನಿಂತರು. ಕನ್ನಡಿಗರು ಒಗ್ಗೂಡಿ ನಿಂತರೆ ಏನನ್ನಾದರೂ ಸಾಧಿಸಬಲ್ಲರು ಎಂಬುದು ಸಾಬೀತಾಯಿತು. ಹಾಗಾಗಲು ಆ ಏಕತೆ ಮೂಡಲು ಒಂದು ದೊಡ್ಡ ಶಕ್ತಿಯ ಅವಶ್ಯಕತೆ ಇತ್ತು. ಆ ಶಕ್ತಿಯೇ ರಾಜ್. ಪ್ರಪಂಚದ ಪ್ರತಿ ಸಂಸ್ಕೃತಿ, ಜನಸಮುದಾಯ ಒಬ್ಬ ಸಾಂಸ್ಕೃತಿಕ ನಾಯಕನನ್ನು ಬಯಸುತ್ತದೆ, ಸೃಷ್ಟಿಸುತ್ತದೆ ಮತ್ತು ಮೆರೆಸುತ್ತದೆ. ಕನ್ನಡಿಗರ ಪಾಲಿನ ಆ ನಾಯಕ ರಾಜ್ ಆಗಿದ್ದರು. ಹೇಳುತ್ತಾ ಹೋದರೆ ಪುಟ ಸಾಲದು. ಅಂತ ಮಾಹಾನ್ ಶಕ್ತಿಯನ್ನು ಮತ್ತೊಮ್ಮೆ ಮಗದೊಮ್ಮೆ ನೆನೆಯಬೇಕೆನಿಸುತ್ತದೆ.

ಹೇಗೆ??

ಉತ್ತರ ಕೊಟ್ಟವರು ಅವಿರತ ತಂಡ. ಎಷ್ಟು ನೆನೆದರೂ ನಿಲ್ಲದ ರಾಜ್ ನೆನೆಪುಗಳಿಗೆ ಹಾತೊರೆಯುವವರಿಗೆ ಅವರ ಹುಟ್ಟುಹಬ್ಬದಂದೇ ಅವರ ಬೃಹತ್ ಲೋಕದ ಒಳಗೆ ಕರೆದುಕೊಂಡು ಹೋದದ್ದು ಅವಿರತ ತಂಡ. ಅವಿರತ ಭ್ರಮೆ ತಂಡದೊಂದಿಗೆ ಕೈಗೂಡಿ ಹಮ್ಮಿಕೊಂಡ 'ರಾಜ್ ರಾಗ' ಒಂದು ವಿನೂತನ ವಿಶಿಷ್ಟ ಪ್ರಯತ್ನ. ರಾಜ್ ರ ಎಲ್ಲಾ ಬಗೆಯ ರಾಗಗಳ ಪರಿಚಯ 'ಮೇದ್ಲ್ೈ'ಗಳ ಮೂಲಕ ಆದರೆ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳ ಪ್ರಸ್ತಾಪ ಆ ರಾಗಗಳ ರಂಗೇರಿಸಿತ್ತು. ರಾಜ್ ರೆ ಮೈವೆತ್ತಿಬಂದತೆ ಆ ಘಟನೆಗಳನ್ನು ನಿರೂಪಿಸಿದ ನಿರೂಪಕ ರೋಹಿತ್ ರೋಹಿತ್ ಸ್ ಹರಿಪ್ರಸಾದ್ ಮಾತುಗಳು ಎಷ್ಟು ಕೆಳಿದಾರೂ ಸಾಲದಾಗಿತ್ತು. ಹಾಡುಗಳ ಸನ್ನಿವೇಶ ಸೃಷ್ಟಿಸಿ ಹಾಡಿ ರಂಜಿಸಿದ್ದು ವಿನೂತನವಾಗಿದ್ದರೆ, ನಾದಮಯ ಹಾಡಿಗೆ ಕೇಳುಗರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಭ್ರಮೆ ತಂಡದ ಹಾಡುಗಾರಿಕೆಗೆ ಕೊಟ್ಟ ಮೆಚ್ಚುಗೆಯಾಯ್ತು. ರಾಜ್ ರ ಮಾತುಗಳನ್ನು ಕೇಳಬೇಕೆನಿಸಿದವರಿಗೆ ನೆರವಾದದ್ದು ರಾಜ್ ಶಾರೀರ ಹೋಲುವ ಜಗದೀಶ್. ರಾಜ್ ರ ಹಿರಣ್ಯಕಷ್ಯಪುವಿನ ಪಾತ್ರ ತೊಟ್ಟ ಆರ್ಭಟಿಸಿದರು. ರಾಜ್ ಧರಿಸಿ ಮೆರೆಸಿದ ಶ್ರೀಕೃಷ್ಣ ದೇವರಾಯ (ರವಿ ಕುಲ್ಕರ್ಣೀ), ರಣಧೀರ ಕಂಠೀರವ (ಸೋಮ), ರಾಘವೇಂದ್ರ ಸ್ವಾಮಿ(ರವೀಂದ್ರ), ಒಂದು ಮುತ್ತಿನ ಕಥೆಯ ಐತ(ವೆಂಕಟ್), ಶಂಕರ್ ಗುರು( ಗುರು ಬಾ), ಬಂಗಾರದ ಮಾನುಷ್ಯದ ರಾಜಪ್ಪ (ಶಿವಲಿಂಗೆ ಗೌಡ) ,ಗಂಧದ ಗುಡಿಯ ಕುಮಾರ್ (ಸಿಯ ) ಸನಾದಿ ಅಪ್ಪಣ್ಣ (ರವಿ ಕುಮಾರ್) ಪಾತ್ರಗಳೇ ಇಂದು ಅವರರನ್ನ ಡೋಲಿಯಲ್ಲಿ ತಂದು ಮೆರೆಸಿದರು. ಕಸ್ತೂರಿ ನಿವಾಸದಲ್ಲಿ ರಾಜ್ ಜೊತೆಗಿದ್ದ ಮಗುವಿನಂತೆ ಮುದ್ದಾದ ಮನ್ವಿತ ಆಡಿಸಿ ನೋಡು ಬೀಳಿಸಿ ನೋಡು ಹಾಡಿಗೆ ಜೀವ ಕೊಟ್ಟಳು. ಇಷ್ಟೆಲ್ಲಾ ಆಗಬೇಕಿದ್ದರೆ ರಾಜ್ ನಮ್ಮೊಂದಿಗಿದ್ದರೆ ಎಷ್ಟು ಚಂದ ಅನ್ನಿಸುವ ಹೊತ್ತಿಗೆ ರಾಜ್ ದ್ವನಿಯೊಂದಿಗೆ ಸಂವಾದ. ರಾಜ್ ರ ಸುಮಾರು ೨೨ ಚಿತ್ರಗಳಿಗೆ ಸಂಗೀತ ಕೊಟ್ಟ ರಾಜನ್, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಶಿವರಾಂ ಸರ್ ನಮ್ಮೊಂದಿಗಿದ್ದು ಕಾರ್ಯಕ್ರಮದ ಸಂತಸ ಹೆಚ್ಚಿಸಿದರು. ವರ್ಣಿಸ ಹೊರಟರೆ ಕಮ್ಮಿ ಎನಿಸುತ್ತದೆ. ಇಲ್ಲಿಗೆ ನಿಲ್ಲಿಸುತ್ತೇನೆ. ಒಂದು ಧೀರ್ಘ ಉಸಿರೆಳೆದು ಮತ್ತೊಮ್ಮೆ ಕಾರ್ಯಕ್ರಮ ನೆನೆಯುತ್ತೇನೆ.
  


ಕಾರ್ಯಕ್ರಮಕ್ಕೆ ದುಡಿದ ಮಧು, ಶಶಿ ರಾಜ ಶಶಿಧರ್, ಜ್ಯೋತಿ,ರವಿಂದ್ರ,ರವಿ ಕುಲಕರ್ಣಿ, ಪ್ರಸನ್ನ ಲಕ್ಷ್ಮೀಪುರ, ಪ್ರಸನ್ನ ಲಕ್ಷ್ಮೀಪುರದೀಪಕ್ ದೀಪಕ್ ಪೀ, ಶ್ರೀಕಾಂತ್, ಕಾರ್ತಿಕ್ ಬೇಲೂರ್, ಕಿರಣ್, ಅನಿಲ್, ರಘು , ಶರತ್ ಗೌಡ, ಗುರು ಬಾ, ಹರೀಶ್,ಸಿಯ, ಮುನಿರಾಜ್, ಶಿವಲಿಂಗೇಗೌಡ, ನಂದಿನಿ, ಸುಶ್ಮ, ಪ್ರತಿಭಾ ಗೌಡ, ಶ್ರಾವಂತಿ, ವರ್ಷ, ಇಲ್ಲಿ ಹೆಸರಿಸಲೇಬೇಕಾದ ಆದರೆ ಹೆಸರು ತಪ್ಪಿರುವ ಹಲವರಿಗೆ, ಪೋಸ್ಟರ್ ವಿನ್ಯಾಸಗೊಳಿಸಿದ ನಾಗರಾಜ್ ಅವರಿಗೆ, ಪ್ರಸಾಧನ ವಿಜಯ್ ಅವರಿಗೆ, ಭ್ರಮೆ ತಂಡಕ್ಕೆ, ಕಾರ್ಯಕ್ರಮದ ಎಲ್ಲಾ ಸಹ ಆಯೋಜಕರಿಗೆ, ಸೂತ್ರದಾರ ಸತೀಶ ಸತೀಶ್ ಅವಿರತ ರವರಿಗೆ, ಕೊನೆಯದಾಗಿ ನಾಡನ್ನು ಸಂಭ್ರಮಿಸುವ, ನಾಡು ನುಡಿ, ಸಂಸ್ಕೃತಿಯ ಬಗ್ಗೆ ಅವಿರತವಾಗಿ ಸಂತಸದಿಂದ ದುಡಿಯುವ, ಅವಿರತಕ್ಕೆ ಒಂದು ದೊಡ್ಡ ಪ್ರಣಾಮ.

ಅವಿರತ ಶಿಕ್ಷಣ ವರ್ಷ 2016 – ಚಿಕ್ಕಮುದವಾಡಿ ಪ್ರೌಢಶಾಲೆಯ ಒಂದು ಅವಲೋಕನ


ಅವಿರತವಾಗಿ ವರ್ಷವಿಡೀ ಸಮಾಜಮುಖಿ ಕಾರ್ಯಕ್ಷೇತ್ರವನ್ನು ತನ್ನದಾಗಿಸಿಕೊಂಡಿರುವ ಅಪರೂಪದ ಸಂಸ್ಥೆ, ’ಅವಿರತ ಪ್ರತಿಷ್ಠಾನ’.  ಈ ಸಂಸ್ಥೆಯ ಒಂದು ಪ್ರಮುಖ ಕಾರ್ಯಸೂಚಿಯಾದ ’ಶಿಕ್ಷಣ’, ವರ್ಷದಿಂದ ವರ್ಷಕ್ಕೆ ಹೊಸ ಹೊಸ ಧ್ಯೇಯ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ’ಅವಿರತ’ ಕಳೆದ ಏಳೆಂಟು ವರ್ಷಗಳಿಂದ ನೂರಕ್ಕೂ ಹೆಚ್ಚು ಶಾಲೆಗಳ ಹತ್ತಾರು ಸಾವಿರ ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುವ ಕಾರ್ಯವನ್ನು ಕರ್ನಾಟಕದಾದ್ಯಂತ ಮಾಡುತ್ತಿದೆ.  ಪ್ರತಿ ವರ್ಷವೂ ಶಾಲಾ ಪ್ರಾರಂಭದ ವೇಳೆ ಹಿತೈಷಿಗಳುಸಹೃದಯರಿಂದ ದೇಣಿಗೆ ಸಂಗ್ರಹಿಸಿನಾವೇ ಖುದ್ದಾಗಿ ಮಕ್ಕಳ ಕೈಗೆ ಪುಸ್ತಕ ತಲುಪಿಸಿ ಬರುವುದೇ ನಮ್ಮ ಹೆಗ್ಗಳಿಕೆ.

’ಅವಿರತ’ ಪ್ರತಿ ಬಾರಿ ಪ್ರತಿ ಶಾಲೆಗೂ ಎಡತಾಕಿದಾಗಲೂ ಗ್ರಾಮೀಣ ಶಾಲೆಗಳ / ಶಿಕ್ಷಕರ / ಮಕ್ಕಳ ಒಂದೊಂದು ಸಮಸ್ಯೆಗಳು ಗೋಚರವಾಗತೊಡಗಿದವು.  ಸರ್ಕಾರದ ಬೆಂಬಲವಿದ್ದಾಗ್ಯೂಶಿಕ್ಷಕರ ಬದ್ದತೆಯ ಜೊತೆಗೂ ಪೋಷಕರ ಆರ್ಥಿಕ ಹಾಗೂ ಪರಿಸರದ ಕಾರಣಗಳಿಂದ ಬೇರು ಮಟ್ಟದಲ್ಲೇ ಮಕ್ಕಳಿಗೆ ಉಂಟಾಗುತ್ತಿರುವ ಸಮಸ್ಯೆಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಅರಿವಾಗ ತೊಡಗಿತು.  ಈ ಸಮಸ್ಯೆಸವಾಲುಗಳನ್ನೆದುರಿಸುವ ನಿಟ್ಟಿನಲ್ಲಿ ಗ್ರಾಮೀಣ ಶಾಲಾ ಮಕ್ಕಳಿಗೆ ಯಾವ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಅನ್ನುವ ಯೋಚನೆ, ’ಅವಿರತ’ದ ಮನಸ್ಸಿನಲ್ಲಿ ಮೊಳಕೆಯೊಡೆದಾಗ ಪ್ರಾರಂಭವಾದದ್ದೇ ಆಪ್ತ ಸಮಾಲೋಚನೆ / ಶಿಕ್ಷಣ ಮಾರ್ಗದರ್ಶನ ಎನ್ನುವ ಮಾರ್ಗಗಳು. 

ಈ ಹಿಂದೆ ಕೆಲವು ಶಾಲೆಗಳಲ್ಲಿ ಮಾರ್ಗದರ್ಶನ ಕಾರ್ಯಕ್ರಮ ಮಾಡಿ ಅನುಭವವಿದ್ದ ಕಾರ್ಯಕರ್ತರು ನಮ್ಮಲ್ಲೇ ಹಲವರಿದ್ದರು.  ಹಿಂದಿನ ಆ ಕಾರ್ಯಕ್ರಮಗಳೆಲ್ಲಾಒಂದು ದಿನದ ಅಥವಾ ಹೆಚ್ಚೆಂದರೆ ಎರಡು ದಿನಗಳ ಮಟ್ಟಿಗಿನ ಕಾರ್ಯಕ್ರಮಗಳಾಗಿದ್ದವು.  ಆದರೆಈ ಬಾರಿ ’ಅವಿರತ’ ತಂಡವು ಈ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮವನ್ನು ಬೇರೆಯದೇ ರೀತಿಯಲ್ಲಿ ಜಾರಿಗೊಳಿಸಲು ಚಿಂತಿಸಿತ್ತು.  ಅದೇನೆಂದರೆ, ’ಮಾರ್ಗದರ್ಶನ’ದ ಅವಶ್ಯಕತೆ ಇರುವ ಒಂದು ಶಾಲೆಯನ್ನು ಗುರುತಿಸಿಆ ಶಾಲೆಯೊಂದಿಗೆ ಸಂಪೂರ್ಣ ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ಆಪ್ತ ಸಮಾಲೋಚನೆಮಾರ್ಗದರ್ಶನಪಠ್ಯೇತರಪಠ್ಯಪೂರಕ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡುವ ಇಚ್ಚೆಗುರಿ ಹೊಂದಿತ್ತು.  ಒಟ್ಟೂ ಕಾರ್ಯಕ್ರಮದ ಸ್ವರೂಪ ಹಾಗೂ ಪ್ರಾಮುಖ್ಯತೆಯ ಅರಿವಿನೊಂದಿಗೆ ಹಾಗೂ ಸಾಕಷ್ಟು ಪೂರ್ವಭಾವಿ ತಯಾರಿಗಳೊಂದಿಗೆ ’ಅವಿರತ ಪಡೆ’ ಸಶಕ್ತ ತರಬೇತಿ ನೀಡಲು ಮುಂದಾಯಿತು.
        
    2015-16 ನೇ ಸಾಲಿನಲ್ಲಿ ಕೆಲವು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಮಾಡಲು ಮೊದಲು ಆಯ್ಕೆ ಮಾಡಿದ್ದುಕನಕಪುರ ತಾಲ್ಲೂಕಿನ ಚಿಕ್ಕಮುದವಾಡಿ ಗ್ರಾಮದ ಪ್ರೌಢಶಾಲೆಯನ್ನು.  ಇಲ್ಲಿ 8, 9 ಹಾಗೂ 10ನೇ ತರಗತಿಗಳು ಸೇರಿ ಒಟ್ಟು 276 ವಿದ್ಯಾರ್ಥಿಗಳಿದ್ದಾರೆ.  ಕೇವಲ 10ನೇ ತರಗತಿಯೊಂದರಲ್ಲೇ 107 ಮಕ್ಕಳಿದ್ದಾರೆ.  ನಮ್ಮ ಮೊದಲ ಭೇಟಿ ದಿನಾಂಕ 10-07-2015 ರಂದು ಅಷ್ಟೂ 276 ವಿದ್ಯಾರ್ಥಿಗಳಿಗೆ ನೋಟ್ ಬುಕ್ ಕೊಡುವ ಕಾರ್ಯಕ್ರಮವಾದರೆಎರಡನೇ ಭೇಟಿದಿನಾಂಕ 01-08-2015 ರಂದು ವಿದ್ಯಾರ್ಥಿಗಳ ಜೊತೆಗಿನ ಆಪ್ತ ಸಮಾಲೋಚನೆಯಾಗಿತ್ತು.  ಈ ಕಾರ್ಯಕ್ರಮವು ಬಹುತೇಕ ಮಕ್ಕಳಲ್ಲಿ ಸ್ವಲ್ಪ ವಿಶ್ವಾಸವನ್ನು ಚಿಗುರುವಂತೆ ಮಾಡಿತ್ತು.

ಆಪ್ತ ಸಮಾಲೋಚನೆ:

            ದಿನಾಂಕ 01-08-2015, ಶನಿವಾರ ಒಟ್ಟು 22 ಜನ ಅವಿರತ ಕಾರ್ಯಕರ್ತರುಗಂಟೆಗೆ ಶಾಲೆಗೆ ತಲುಪಿ ಒಬ್ಬೊಬ್ಬರೂ 21 ಮಕ್ಕಳನ್ನು ಗುಂಪು ಮಾಡಿEnglish Communication ಬಗ್ಗೆವಿವಿಧ ವೃತ್ತಿಗಳಹುದ್ದೆಗಳ ಬಗ್ಗೆಅವರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.  ಒಂದು ತಂಡವು ಪೋಷಕರ ಜೊತೆ ಸಭೆ ನಡೆಸಿ ಮಕ್ಕಳ ಜೊತೆಗಿನ ಒಡನಾಟದ ಬಗ್ಗೆ ಮಾಹಿತಿ ನೀಡಿದರು.  ಕೊನೆಗೆ ಅವರೆಲ್ಲರಿಮ್ದ ವೈಯಕ್ತಿಕವಾಗಿ feedback ತೆಗೆದುಕೊಳ್ಳಲಾಯಿತು.  ಇಲ್ಲಿ ನಮಗಾದ ಅನುಭವ ವಿಶೇಷವಾಗಿತ್ತು.  ಪ್ರೌಢಶಾಲಾ ಮಟ್ಟದಲ್ಲಿ ಕನ್ನಡದಲ್ಲಿ ಕಾಗುಣಿತಅಕ್ಷರದೋಷವಾಕ್ಯರಚನೆ ಮುಂತಾದ ಸಾಮಾನ್ಯ ಸಮಸ್ಯೆಗಳಿಂದ ಮೊದಲುಗೊಂಡುದಿನವೂ 5 , 6 ಕಿಲೋಮೀಟರ್ ನಡೆದು ಶಾಲೆಗೆ ಬರಬೇಕಾದಂತಹ ಹತ್ತಾರು ಸ್ಥಳೀಯ ಸಮಸ್ಯೆಗಳಿದ್ದವು.  ಆದರೆಅವೆಲ್ಲವನ್ನೂ ಮೀರಿದ ಅದಮ್ಯ ಉತ್ಸಾಹ ಆ ಮಕ್ಕಳಲ್ಲಿತ್ತು.  ನಮಗೆ ಪ್ರೇರಣೆಯಾಗಿದ್ದೂ ಕೂಡ ಅದೇ ’ತಗ್ಗದಿರುಕುಗ್ಗದಿರು’ ಮನೋಭಾವ.  ಈ ಅನುಭವಗಳ ಜೊತೆ ಶಿಕ್ಷಕರೊಂದಿಗೂ ದೀರ್ಘ ಮಾತುಕತೆ ನಡೆಸಿದಾಗಮಕ್ಕಳಿಗೆ ಅವಶ್ಯಕವಾಗಿ ಬೇಕಾದ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರತಿ ಮಗುವಿನಲ್ಲಿರಬೇಕಾದ ಆತ್ಮ ಸ್ಥೈರ್ಯವನ್ನು ಹುರಿದುಂಬಿಸುವಲ್ಲಿ ಅವಿರತ ಸಹಾಯ ಮಾಡಬಹುದೆಂದು ಮನವರಿಕೆಯಾಯಿತು.

ಕ್ರೀಡಾ ದಿನ:

ಅಲ್ಲಿನ ಉತ್ಸಾಹಿ ಶಿಕ್ಷಕರು ನಮ್ಮ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತರು.  ಅವರ ಕೋರಿಕೆಯಂತೆ ಆ ಮಕ್ಕಳಿಗೆ sportswear (ಕ್ರೀಡಾ ಸಮವಸ್ತ್ರ)ಗ್ರಂಥಾಲಯಕ್ಕೆ ಪುಸ್ತಕಗಳು ಮತ್ತು ಕ್ರೀಡಾ ಸಲಕರಣೆಗಳ ಅವಶ್ಯಕತೆಯಿತ್ತು.  ’ಅವಿರತ’ದ ಉತ್ಸಾಹಿ ಸದಸ್ಯರುOracle ಕಂಪೆನಿಯ CSR ಕಾರ್ಯಕ್ರಮದ ಮೂಲಕ ಒಂದೇ ವಾರದಲ್ಲಿ ಸುಮಾರು 25,000 ರೂಪಾಯಿಗಳ ದೇಣಿಗೆಯಿಂದ ಆ ಶಾಲೆಯು ಕೇಳಿದ ಅಷ್ಟೂ ಅವಶ್ಯಕತೆಗಳನ್ನು ಪೂರೈಸಲು ತಯಾರಾಯಿತು.  ದಿನಾಂಕ12-09-2015 ರಂದು (ಕೇವಲ ಮೂರು ದಿನದ ಹಿಂದೆ ಕಣಕಣದಲ್ಲೂ ದೇಶಭಕ್ತಿ ಹೊಂದಿದ್ದ ಅಬ್ದುಲ್ ಕಲಾಂ ಅವರು ನಮ್ಮೆಲರನ್ನೂ ಅಗಲಿದ್ದರು).  ಆ ಶಾಲೆ ನಮ್ಮ ಕ್ರೀಡಾ ಪರಿಕರಗಳೆಲ್ಲವನ್ನೂ ಸಮರ್ಪಿಸಿಕೊಳ್ಳುವುದರ ಜೊತೆಗೆ ಅರ್ಥಪೂರ್ಣ ’ಕ್ರೀಡಾ ದಿನ’ವನ್ನು ಆಚರಿಸಿಕೊಂಡಿತು.  ಇಡೀ ದಿನ ’ಅವಿರತ’ದ ಮಾಜಿ ರಾಷ್ಟ್ರೀಯ ಆಟಗಾರರು ಮಕ್ಕಳಿಗೆ ಆಟೋಟಗಳ ಪರಿಚಯ ಮಾಡಿಕೊಟ್ಟರು.  ಅಂದು ಓದಿನಲ್ಲಿ ಹಿಂದುಳಿದಿದ್ದ ಆದರೆ ಅಕ್ಷರಶ: ಕ್ರೀಡೆಯಲ್ಲಿ ಮುಂದಿದ್ದ ಹಲವಾರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವಲ್ಲಿ ಸಹಕಾರಿಯಾಯಿತು.


ವೃತ್ತಿ / ಶಿಕ್ಷಣ ಮಾರ್ಗದರ್ಶನ:
       ಈ ಮಧ್ಯೆಮಕ್ಕಳನ್ನು ನೀವು ಮುಂದೇನಾಗಬೇಕು ಎಂದು ಕೇಳಿದಾಗ ಬಹುತೇಕ ಮಕ್ಕಳು ಹೇಳಿದ್ದು, ’ಪೋಲೀಸ್ಎಂದು.  ಇದಕ್ಕೆಂದೇ ನಮ್ಮ ಕಾರ್ಯಕ್ರಮಗಳಲ್ಲೊಂದು ದಿನ ಕನಕಪುರ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಅವರನ್ನು ಆಮಂತ್ರಿಸಿ, ಅವರಿಂದ ಮಕ್ಕಳಿಗೆ ಪೋಲೀಸ್ ಇಲಾಖೆಯಲ್ಲಿನ ವಿವಿಧ ಹುದ್ದೆಗಳು, ಅದಕ್ಕೆ ಬೇಕಾಗುವ ಕನಿಷ್ಠ ವಿದ್ಯಾರ್ಹತೆ, ಎಲ್ಲದರ ಬಗ್ಗೆ ಸವಿಸ್ತಾರವಾಗಿ ವಿಶದಪಡಿಸಲಾಯಿತು.

’ವಿಜ್ಞಾನ ವಿಸ್ಮಯ’
’ಅವಿರತ’ದ ಮೂಲ ಸೆಲೆ ಇರುವುದೇ ಸರಿಸುಮಾರು 30ರ ಆಚೀಚಿನ ಸೇವಾಬದ್ದತೆಯುಳ್ಳ ಯುವಕ ಯುವತಿಯರಲ್ಲಿ.  ಬಹುತೇಕರು ವಿಜ್ಞಾನದ ಉನ್ನತ ಅಧ್ಯಯನದ ಮೂಲಕವೇ ವೃತ್ತಿ ಹೊಂದಿರುವಂಥವರು.  ಈ ಇಂತಹ ಕಾರ್ಯಕರ್ತರು ಕಟ್ಟಿದ ಪಡೆಯೇ ’ಅವಿರತ ವಿಜ್ಞಾನ ವಿಸ್ಮಯ’.  ಈ ಪಡೆ ಜವಾಹರಲಾಲ್ ಪ್ಲಾನಿಟೋರಿಯಂವಿಶ್ವೇಶ್ವರಯ್ಯ ಮ್ಯೂಸಿಯಂಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಂತಾದ ಸಂಸ್ಥೆಗಳೊಡಗೂಡಿ ತಾವೇ ಸ್ವಯಂ ತರಬೇತಿ ಹೊಂದಿ ಮಕ್ಕಳಿಗೆ ವಿಜ್ಞಾನದ ರುಚಿ ಹತ್ತಿಸಲು ತಯಾರಾದ ಸಶಕ್ತಕೂಟ.  ದಿನಾಂಕ 08-10-2015 ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಇಬ್ಬರು ವಿಜ್ಞಾನಿಗಳ ಜೊತೆಗೂಡಿ ಒಂದು ದಿನದ ವಿಜ್ಞಾನ ಕಾರ್ಯಾಗಾರವನ್ನು ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಅನೇಕ ಪ್ರಯೋಗಗಳನ್ನು ಮಾಡಿ ತೋರಿಸಿತು.  ಕಾರ್ಯಕ್ರಮ ಮುಗಿದ ಮೇಲೆ ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆಗಳು ನಮ್ಮ ಪ್ರಯತ್ನದ ಸಾರ್ಥಕತೆಗೆ ಸಾಕ್ಷಿಯಂತಿದ್ದವು.

ಕೌಶಲ್ಯ ತರಬೇತಿ

        ಶಿಕ್ಷಕರ ಮನವಿಯ ಮೇರೆಗೆ ಮಾಡಿದ ಇನ್ನೊಂದು ಅವಶ್ಯಕ ಕಾರ್ಯಕ್ರಮ ಅಥವಾ ತರಬೇತಿ, memory techniques training’.  ನಮ್ಮ ಸದುದ್ದೇಶವನ್ನು ಅರ್ಥ ಮಾಡಿಕೊಂಡ ಪ್ರಖ್ಯಾತ ತಜ್ಞ ರಮೇಶ್ ಬಾಬು ಅವರು ತುಮಕೂರಿನಿಂದ ತಮ್ಮದೇ ಸ್ವಂತ ಖರ್ಚಿನಲ್ಲಿ ಶಾಲೆಗೆ ಭೇಟಿ ನೀಡಿಗಂಟೆಗಳ ಕಾಲ ನೆನಪಿನ ಶಕ್ತಿಯ ಬಗ್ಗೆಉತ್ತರ ಬರೆಯುವ ಯುಕ್ತಿಗಳ ಬಗ್ಗೆದಿನಚರಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ನೆರವಾದರು.

 ಕನ್ನಡ ಅಭಿವೃದ್ದಿ ಪ್ರಾಧಿಕಾರವು ಗ್ರಾಮೀಣ ಶಾಲೆಗಳಿಗೆಂದೇ ಕೊಡಮಾಡುವ ಅನುದಾನದಲ್ಲಿ ಅವಶ್ಯಕವಾಗಿ ಬೇಕಾಗುವ ಪೀಠೋಪಕರಣಗಳನ್ನು ಒದಗಿಸುವ ಪ್ರಯತ್ನವೂ ನಡೆಯುತ್ತಿದೆ.  ಇದರ ಫಲವಾಗಿಈ ಶಾಲೆಗೆ ಅಗತ್ಯವಿರುವ ಪೀಠೋಪಕರಣಗಳು ಸದ್ಯದಲ್ಲೇ ದೊರಕಲಿವೆ

     ಕಳೆದ ವಾರ ಅಲ್ಲಿನ ಶಿಕ್ಷಕರು ಫೋನ್ ಮಾಡಿ, ’ಸಾರ್, ’ಅವಿರತ’ದ ಕಾರಣದಿಂದ ಎಲ್ಲಾ ಮಕ್ಕಳೂಎಲ್ಲಾ ತರಗತಿಗಳಲ್ಲೂ Special Classes (ವಿಶೇಷ ತರಗತಿಗಳು) ಗಳಿಗೂ ಹಾಜರಾಗುತ್ತಿದ್ದಾರೆ. ನೀವು ಹುಟ್ಟು ಹಾಕಿದ ಈ ಹುರುಪು ಒಳ್ಳೆಯ ಫಲಿತಾಂಶ ತರುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.  ಈ ಶನಿವಾರ26-03-2015 ರಂದು Hall Ticket ಕೊಟ್ಟು ಹರಸಿ ಕಳುಹಿಸುತ್ತಿದ್ದೇವೆ.  ನೀವು ಬಂದು ಮಕ್ಕಳನ್ನು ಮಾತನಾಡಿಸಿದರೆ ಮಕ್ಕಳಲ್ಲಿ  ಇನ್ನೂ ಸ್ವಲ್ಪ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬನ್ನಿ’ ಎಂದರು.  ಇಲ್ಲವೆನ್ನಲು ಮನಸ್ಸಾಗಲಿಲ್ಲ.  ’ಅವಿರತ’ದ ಮತ್ತೊಬ್ಬ ವೃತ್ತಿಪರ ಮಾರ್ಗದರ್ಶಕರೊಬ್ಬರೊಂದಿಗೆ ಹೋಗಿ ಮಕ್ಕಳನ್ನು ಇನ್ನಷ್ಟು ಹುರಿದುಂಬಿಸಿ ಬಂದಿದ್ದೇವೆ.  ಅಂದು ಶಾಲೆಗೆ ಭೇಟಿ ನೀಡಿದ ಎಲ್ಲಾ ಅವಿರತದ ಸದಸ್ಯರಿಗೂ ಮಕ್ಕಳು ಹಾಗೂ ಶಿಕ್ಷಕರು ಸೇರಿ ಅನಿರೀಕ್ಷಿತವಾಗಿ ಸನ್ಮಾನವನ್ನೂ ಮಾಡಿದರು.   ಆ ಮಕ್ಕಳಿಗೆ ನಿಮ್ಮೆಲ್ಲರ ಹಾರೈಕೆ ಇರಲಿ.


ಶಿವಪ್ರಕಾಶ್
ಅವಿರತ