Saturday, November 11, 2017

ನಮಗೀಗ ೧೦ ವರ್ಷ..!

"ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎನ್ನುವ ಮಾತಿಗೆ ಪೂರಕವಾಗಿ ಸಮಾಜಕ್ಕೆ ನಮ್ಮಿಂದಾಗುವ ಅತ್ಯಲ್ಪ ಕಾರ್ಯಗಳನ್ನು ಮಾಡುವ ಸದ್ದುದೇಶದಿಂದ ಸಮಾನ ಮನಸ್ಸುಗಳಿಂದ ಹುಟ್ಟಿಕೊಂಡಿದ್ದು "ಅವಿರತ" ತಂಡ. ೨೦೦೭ರಲ್ಲಿ ಶುರುವಾದ ನಮ್ಮಯ ಪಯಣ ಇಲ್ಲಿಯವರೆಗೆ ಅಡೆತಡೆಯಿಲ್ಲದೆ ೧೦ ಸಾರ್ಥಕ ವರುಷಗಳನ್ನು ಪೂರೈಸಿದೆ. 


"ಎಲ್ಲರಿಂದ ಸಮಾಜ" ಎನ್ನುವ ಸತ್ಯಕ್ಕೆ, ನಂಬಿಕೆಗೆ ಪೂರಕವಾಗಿ ನಮ್ಮ ಪರಿಮಿತಿಯಲ್ಲಿ ಸಾಧ್ಯವಾಗುವ ಈ ಕೆಳಗಿನ ಕೆಲಸಗಳನ್ನು ಜಾಗರೂಕತೆಯಿಂದ ಆಯ್ದುಕೊಂಡು ಸ್ನೇಹಿತರ, ಬಂಧುಗಳ & ನಮ್ಮ ನಂಬಿದ ಹೃದಯಗಳ ಸಹಕಾರದಿಂದ ಮುನ್ನಡೆದಿದ್ದೇವೆ.
  • ನೋಟ್-ಪುಸ್ತಕ ವಿತರಣೆ
  • ವೃತ್ತಿ ದಾರಿದೀಪ
  • ಕಂಪ್ಯೂಟರ್ ಕಲಿಕೆ
  • ವಿಜ್ಞಾನ ಪ್ರಯೋಗಗಳು
  • ಆರೋಗ್ಯ ಶಿಬಿರ
  • ಕಲೆ-ಸಾಹಿತ್ಯ
  • ಮಾತು ಮಂಥನ
  • ದೇಸಿ ಸೊಗಡು
  • ಚಲನಚಿತ್ರ ಚರ್ಚೆ

ಉತ್ತಮ ಸಮಾಜದ ನಿರ್ಮಾಣಕ್ಕೆ & ಅಭಿವೃದ್ಧಿಗೆ "ಶಿಕ್ಷಣ" ಅತ್ಯವಶ್ಯಕ. ಶಿಕ್ಷಣದಿಂದ ಮಾತ್ರ ಬದಲಾವಣೆಯ ತಂಗಾಳಿ ಸಾಧ್ಯ. ಹಳ್ಳಿಗಳಲ್ಲಿ ಮಕ್ಕಳ ಶಿಕ್ಷಣದ ಉತ್ತೇಜನಕ್ಕಾಗಿ, ಆರ್ಥಿಕವಾಗಿ ಹಿಂದುಳಿದ ಪಾಲಕರ ಹೊರೆಯನ್ನು ತಗ್ಗಿಸುವುದ್ದಕ್ಕಾಗಿ ನಾವು ಕಂಡಕೊಂಡ ಮಾರ್ಗ ಎಂದರೆ ನೋಟ್ ಪುಸ್ತಕ ವಿತರಣೆ. ೧ ಶಾಲೆಯ ೩೦ ಮಕ್ಕಳಿಂದ ಆರಂಭವಾದ ನೋಟ್ ಪುಸ್ತಕ ವಿತರಣೆ, "ನನ್ನ ಶಾಲೆ - ನನ್ನ ಹೆಮ್ಮೆ” ಚಿಂತನೆಯ ಪರಿಣಾಮವಾಗಿ ಅವಿರತದ ವಾರ್ಷಿಕ ಯೋಜನೆಯಾಗಿ ರೂಪುಗೊಂಡು ಇಂದು ೧೭೦ಕ್ಕೂ ಹೆಚ್ಚು ಶಾಲೆಗಳು ೨೫೦೦೦ಕ್ಕೂ ಹೆಚ್ಚು ಮಕ್ಕಳನ್ನು ತಲುಪಿದ್ದು ನಮ್ಮ ಹೆಮ್ಮೆ. ಇದರಲ್ಲಿ ೯೯% ಹಳ್ಳಿಯ ಶಾಲೆಗಳ ಮಕ್ಕಳೇ ಫಲಾನುಭವಿಗಳು. ೧೦ ವರ್ಷದ ಪಯಣದಲ್ಲಿ ಸಾವಿರಾರು ಮಕ್ಕಳ ಒಡನಾಟ ದೊರೆತದ್ದು, ಅವರ ಮುದ್ದು ಮುಖದಲ್ಲಿ ಮೂಡುವ ಮುಗ್ದ ನಗುವಿಗೆ ಸಾಕ್ಷಿಯಾಗಿದ್ದಕ್ಕೆ, ಎಲ್ಲ ಮಕ್ಕಳ ಅಪ್ಪ-ಅಮ್ಮಂದಿರ, ಶಾಲೆಯ ಶಿಕ್ಷಕರ ಪ್ರೀತಿಗೆ ಭಾಜನವಾಗಿದ್ದು ನಮ್ಮ ಪುಣ್ಯ ಮತ್ತು ಗರ್ವವೂ ಕೂಡ.

ಕೇವಲ ಪುಸ್ತಕ ವಿತರಣೆಗೆ ಸೀಮಿತವಾಗದೆ ಹಳ್ಳಿಯ ಮಕ್ಕಳಿಗೆ ಇನ್ನಷ್ಟು ಕೆಲಸಗಳನ್ನು ದಾಟಿಸುವ ಪ್ರಯತ್ನವಾಗಿ ವಿಜ್ಞಾನದ ಪ್ರಯೋಗಗಳು, ಮುಂದೆ ವೃತ್ತಿಯಲ್ಲಿರುವ ವಿವಿಧ ಮಾರ್ಗಗಳನ್ನು ತಿಳಿಸುವ ಕಾರ್ಯಾಗಾರಗಳು, ಆರೋಗ್ಯದ ತಿಳುವಳಿಕೆ & ಶಿಬಿರಗಳು, ಕಂಪ್ಯೂಟರ್ ತರಬೇತಿಗಳನ್ನೂ ಕೂಡ ಅವಿರತ ಹಮ್ಮಿಕೊಳ್ಳುತ್ತಾ ನಡೆದಿದೆ.

ಕಲೆ-ಸಾಹಿತ್ಯ ಅವಿರತದ ಇನ್ನೊಂದು ಸದಭಿರುಚಿಯ ಕಾರ್ಯಕ್ಷೇತ್ರ. ಕನ್ನಡದ ಸಾಹಿತಿಗಳ ಸಾಹಿತ್ಯದ ತಿಳುವಳಿಕೆಯನ್ನು ಹೆಚ್ಚಿಸುವ ಕಮ್ಮಟಗಳನ್ನು, ವಿವಿಧ ಸಂಗೀತ ಕಾರ್ಯಕ್ರಮಗಳನ್ನು, ಉತ್ತಮ ನಾಟಕಗಳ & ಕಲಾತ್ಮಕ ಚಲನ ಚಿತ್ರಗಳ ಪ್ರದರ್ಶನ ಹಾಗೂ ಸಂವಾದಗಳನ್ನು ಅಲ್ಲದೇ ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ಕಾರ್ಯವನ್ನು ಅವಿರತ ಕಳೆದ ೧೦ ವರ್ಷಗಳಿಂದ ಮಾಡುತ್ತಾ ಬಂದಿದೆ.
ಅವಿರತದ ನಿರಂತರ ಕೆಲಸಗಳಿಗೆ, ಬೆಳವಣಿಗೆಗೆ ನಿಮ್ಮೆಲ್ಲರ ತನು-ಮನ-ಧನದ ಸಹಕಾರ ಪ್ರೋತ್ಸಾಹ ಅವಶ್ಯ. 

೧೦ ವರ್ಷ ಪೂರೈಸಿದ ಸಂಭ್ರಮಕ್ಕೆ, ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಚಲನ ಚಿತ್ರಗೀತೆಗಳ ಕಾರ್ಯಕ್ರಮವನ್ನು ಡಿಸೆಂಬರ್ ೧೭ರಂದು ಸಂಜೆ ೬ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಿದೆ. ಪ್ರವೀಣ್ ಡಿ ರಾವ್ & ತಂಡದವರ ಸಂಗೀತ ಸಂಯೋಜನೆಯಲ್ಲಿ ಸಿ. ಅಶ್ವತ್ಥ್ ಗಾನ ಸುಧೆ ಹರಿಯಲಿದೆ.


ಬನ್ನಿ, ಸಂಗೀತ ಸಂಭ್ರಮಕ್ಕೆ ಭಾಗಿಯಾಗಿ.

ರವಿ ಕುಲಕರ್ಣಿ,
ಅವಿರತ ಪ್ರತಿಷ್ಠಾನ

Saturday, July 15, 2017

ಸಖಿಯರಿಗೆ ಅವಿರತ "ವಿದ್ಯಾರ್ಥಿ-ವೇತನ"

ಸಖಿಯರಿಗೆ ಅವಿರತ "ವಿದ್ಯಾರ್ಥಿ-ವೇತನ"
ಸಖಿ ಟ್ರಸ್ಟ್ ಮಹಿಳೆಯರ ವಿರುದ್ಧದ ತಾರತಮ್ಯ, ಲೈಂಗಿಕ ಶೋಷಣೆ, ಹಿಂಸೆ ಮತ್ತು ದಲಿತ, ಅಸ್ಪೃಶ್ಯರ ಏಳಿಗೆಗೆ ಹೋರಾಡುವ ಸಂಘಟನೆ. ದಲಿತ ಮಹಿಳೆಯರು ಹಾಗೂ ಮಕ್ಕಳಿಗೆ ಶಿಕ್ಷಣವನ್ನು ಹಾಗೂ ಸುರಕ್ಷಿತ ವಸತಿ ಸೌಕರ್ಯವನ್ನು ಒದಗಿಸುತ್ತದೆ. ಸಖಿ, ಶಾಲಾ ಕಾಲೇಜುಗಳಲ್ಲಿ ದಲಿತರ ಸಮಸ್ಯಗಳನ್ನು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದೆ ಅಲ್ಲದೆ ಮಾನಸಿಕ ಒತ್ತಡ, ಮದ್ಯಪಾನ ಮತ್ತು ಮಾದಕ ಸೇವೆನೆ ಅಂತಹ ವಿಷಯಗಳ ತಿಳುವಳಿಕೆಯನ್ನೂ ನೀಡುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ಮಹಿಳೆಯರಿಗೆ ನೇರ ಬೆಂಬಲ ಮತ್ತು ಕಾನೂನು ನೆರವನ್ನು ಸಖಿ ಟ್ರಸ್ಟ್ ಕೊಡುತ್ತಿದೆ. ಸ್ಥಳೀಯ ಯುವತಿಯರ ಸಹಾಯದಿಂದ, ಗಣಿಗಾರಿಕೆ ಪ್ರದೇಶಗಳಲ್ಲಿ ಬಾಲಕಾರ್ಮಿಕರ ಮತ್ತು ಮಹಿಳಾ ಕಾರ್ಮಿಕರ ಶೋಷಣೆ ತಡೆಯಲು ಕಾರ್ಯಕ್ರಮಗಳನ್ನು ಮಾಡುತ್ತಿದೆ.


ಸಖಿ ತಂಡದ ಮತ್ತೊಂದು ಗಮನಾರ್ಹ ಕೆಲಸವೆಂದರೆ, ದೇವದಾಸಿಯರ ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಿದೆಯಲ್ಲದೆ ಅವರ ವಸತಿಯ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಈ ಅತ್ಯುತ್ತಮ ಕೆಲಸಕ್ಕೆ ಅವಿರತವು ಕೈ ಜೋಡಿಸಿದ್ದು ಮಕ್ಕಳಿಗೆ ಪಿಯು,ಪದವಿ ಹಾಗೂ ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಹಾಯದ ಹಸ್ತವನ್ನು ಚಾಚುತ್ತಿದೆ. ಕಳೆದ ವರ್ಷ ಆಯ್ದ ೮೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ-ವೇತನವನ್ನು ನೀಡಿತ್ತು, ಈ ವರ್ಷ ಆಯ್ದ ೧೦೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ-ವೇತನವನ್ನು ನೀಡುವ ಗುರಿ ಹೊಂದಿದೆ.

ಸ್ನೇಹಿತರೆ ಬನ್ನಿ, ಸ್ವಾವಲಂಬಿ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ. ನಮ್ಮ ಜೊತೆಗೂಡಿ. ಸಹಾಯ ಮಾಡಲಿಚ್ಛಿಸುವವರು ನನ್ನನ್ನು ಅಥವಾ ಸತೀಶ್.ಕೆ.ಟಿ ಅವರನ್ನು ಸಂಪರ್ಕಿಸಿ.

ಸತೀಶ್.ಕೆ.ಟಿ: ೯೮೮೦೦ ೮೬೩೦೦

ರವಿ ಕುಲಕರ್ಣಿ,
ಅವಿರತ ಪ್ರತಿಷ್ಟಾನ

Monday, November 28, 2016

ಕೆ.ವೈ.ಎನ್ ಕನ್ನಡ ರಂಗಭೂಮಿಯ ‘ಗ್ರೀನ್-ಟೂತ್’ ಆಗಲಿ: ಡಾ. ಹಂಸಲೇಖ

ನವೆಂಬರ್ ೨೭, ರವಿವಾರದಂದು ರಂಗ ಸಂಭ್ರಮಕ್ಕೆ ಪ್ರಭಾತ ರಂಗಮಂದಿರ ಸಾಕ್ಷಿಯಾಯಿತು. ಹೌದು, ಅವತ್ತು ನಡೆದಿದ್ದು ಕೆ.ವೈ.ಎನ್ ರಂಗಗೀತೆ & ನಾಟಕ ಪುಸ್ತಕಗಳ ಬಿಡುಗಡೆ ಮತ್ತು ರಂಗಗೀತೆಗಳ ಸಂಗೀತ ಸಂಜೆ. ವಿಶೇಷ ಸಂಜೆಗೆ ಅವಿರತವು ಕಾರಣವೆನ್ನುವುದು ನಮ್ಮ ಹೆಮ್ಮೆ.


ಸುಪರಿಚಿತ ನಾಟಕಕಾರ, ಸಾಹಿತಿ ಮೇಷ್ಟ್ರು ಕೆ.ವೈ. ನಾರಾಯಣಸ್ವಾಮಿಯವರ ರಂಗ ಹಾಡುಗಳು ನಾಟಕಗಳಿಗೆ ಹೊಸ ಜೀವಂತಿಕೆ, ಲವಲವಿಕೆಯನ್ನು ಹಾಗೂ ಮಿಂಚನ್ನೂ ತಂದುಕೊಟ್ಟಂತಹವು. ಅವರ ನಾಟಕಗಳು ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ತಂದು ಕೊಟ್ಟಿವೆ. ಕೆ.ವೈ.ಎನ್ ಅವರ ಈವರೆಗಿನ ಎಲ್ಲಾ ರಂಗಗೀತೆಗಳು ಮತ್ತು ಅವರ ನಾಟಕಗಳಾದ ಅನಭಿಜ್ಞ ಶಾಕುಂತಲ, ಪಂಪಭಾರತ ಹಾಗೂ ಚಕ್ರರತ್ನ ಕೂಡಾ ಪುಸ್ತಕಗಳಾಗಿ ಅರ್ಪಿತವಾದವುಪುಸ್ತಕ ಬಿಡುಗಡೆಯ ಸಾಂಪ್ರದಾಯಿಕ ವಿಧಾನವನ್ನು ಮುರಿದು ವಿಶೇಷಿತವಾದ ಸಂಗೀತ ಸಂಜೆಯ ನಡುವೆ ರಂಗ ಸಜ್ಜೆಯಲ್ಲಿ ನಾಟಕಕಾರರು, ನಿರ್ದೇಶಕರು, ಸಂಗೀತಗಾರರು, ನಟರು, ವಿಮರ್ಶಕರು ಹಾಗೂ ರಂಗಾಭಿಮಾನಿಗಳ ಉಪಸ್ಥಿತಿಯಲ್ಲಿ ರಂಗಗೀತೆ ಮತ್ತು ನಾಟಕ ಪುಸ್ತಕಗಳು ಲೋಕಾರ್ಪಣೆಯಾದವು.

ಗೋಪಾಲ ವಾಜಪೇಯಿಯವರ ಯಾವ ದೇಶದ ರಮಣ ಬಂದು ಏನ ಮೋಸವ ಮಾಡಿದ ಗೀತೆಯೊಂದಿಗೆ ಶುರುವಾಗಿ, ಮೈಸೂರು ರಾಜ್ಯದ ದೊರೆಯೆ, ನ್ಯಾಸ್ತಾನೆ ನೆಲ ಬಾಲನೆ, ಕನ್ನಡಿಯೇ ಮಾಯಾ ಕನ್ನಡಿಯೇ, ನಂಬಿದ ದಡಗಳೆ, ಶ್ರೀ ಗಣರಾಯ ಶರಣು ಶರಣು, ಅಸ್ತಂಗತ ಸೂರ್ಯ, ನನ್ನೊಳಗೂ ಇತ್ತೇನೋ, ಸೂಜಿಯೇ ಓ ಸೂಜಿಯೇ, ಗಜವದನ ಹೇ ರಂಭಾ, ಮಾಯದೊ ಮನದ ಭಾರ, ಆಕಾಶವೆಂಬುದು ಮಾಯಾ ಮಂಟಪ ಮುಂತಾದ ಮೋಹಕ ಹಾಡುಗಳ ರಸದೌತಣವನ್ನು ರಾಮಚಂದ್ರ ಹಡಪದ್ ಮತ್ತು ಅನನ್ಯ ಭಟ್ ತಂಡ ಭರ್ಜರಿಯಾಗಿ ಉಣಬಡಿಸಿತು.

ಕೆ.ವೈ.ಎನ್ ಗೆ ಅನಿರೀಕ್ಷಿತವಂತೆ, ಅವರ ಮಗಳು ಸುವ್ವಿ ಮಾತಾಡಿ ಅಪ್ಪನ ಜೊತೆಗಿನ ಪ್ರೀತಿ, ಒಡನಾಟ, ಬೆಳಿಸಿದ ಪರಿ ಅಲ್ಲದೆ ಹುಟ್ಟು ಹಬ್ಬಕ್ಕೆ ಅಪ್ಪ ಬರೆದ ಒಲವಿನ ಮಮತೆಯ ಪತ್ರವನ್ನು ಸಭೆಯೊಂದಿಗೆ ಹಂಚಿಕೊಂಡು ಸಂಭ್ರಮಿಸಿ ಅಪ್ಪನಿಗೆ ಶುಭ ಕೋರಿದರು.
ನಾಟಕಕಾರ ನಾರಾಯಣ ರಾಯಚೂರು ಪುಸ್ತಕದ ಬಗ್ಗೆ ಮಾತಾಡಿ, ಕೆ.ವೈ.ಎನ್ ಬಳಸುವ ಪದಗಳು, ಪ್ರತಿಮೆಗಳು ಮತ್ತು ಸಾಂದರ್ಭಿಕತೆ ನಾಟಕದ ಹಾಡುಗಳಿಗೆ ಇರಬೇಕಾದ ಚೌಕಟ್ಟು ಅತ್ಯಂತ ಪರಿಪೂರ್ಣವಾಗಿವೆ. ಪನ್ ಬಳಕೆಯಲ್ಲೂ ಅವರು ಕೆಲಸ ಮಾಡಿರುವುದು ಸಂತೋಷದ ವಿಷಯ.  ಗೀತ ಸಂಗೀತಗಳು ಪ್ರದರ್ಶಕ ಕಲೆಯ ಭಾಗವಾಗಿವೆ ಅಲ್ಲದೆ ರಂಗಭೂಮಿಯು ಕೂಡ ಅವನ್ನು ಸಮೃದ್ಧಗೊಳಿಸಿವೆ. ೧೯೮೮-೮೯ ರಲ್ಲಿ ಮೊದಲ ಬಾರಿಗೆ ರಂಗಗೀತೆಗಳ ಸಂಗ್ರಹ ಹೊರ ತರುವ ಪ್ರಯತ್ನವಾಗಿತ್ತು. ಉತ್ತರ ಕರ್ನಾಟಕದಲ್ಲಿಯ ವೃತ್ತಿ ರಂಗಭೂಮಿಯ ಅನೇಕರ ರಂಗಗೀತೆಗಳು ಒಟ್ಟುಗೂಡಿ ಸಂಗ್ರಹ ಕೂಡ ಬಂದಿದೆ. ಆದರೆ ರಂಗಗೀತೆಗಳ ಪುಸ್ತಕದ ಇತಿಹಾಸದಲ್ಲಿ ಒಂದೇ ವ್ಯಕ್ತಿಯ ರಂಗಗೀತೆಗಳ ಪುಸ್ತಕ ಹೊರತಂದಿರುವ ವಿನೂತನ, ಅಪರೂಪದ ಪ್ರಯತ್ನ ಇದೆ ಮೊಟ್ಟ ಮೊದಲು ಎಂದ ಅವರು, ಇಂತಹ ವಿಶೇಷಕ್ಕೆ ಹೆಜ್ಜೆ ಇಟ್ಟ ಅವಿರತವನ್ನು ಶ್ಲಾಘಿಸಿದರು.

ಸಂಗೀತ ಮಾಂತ್ರಿಕ ಡಾ. ಹಂಸಲೇಖ ಪುಸ್ತಕ ಬಿಡುಗಡೆಗೊಳಿಸಿ ಮಾತಾಡಿ, ಕೆ.ವೈ.ಎನ್ ನನ್ನ ಗುರು-ಮಿತ್ರ ಮತ್ತು ಬಹಳ ಇಷ್ಟವಾದ ವ್ಯಕ್ತಿ. ಅವರು ಅಹಂ ಅಲ್ಲಿ ಅಲ್ಟಿಮೇಟ್ & ಸೋಲುವುದರಲ್ಲಿ ಇಂಟಿಮೇಟ್, ಅಹಂ ಅವರ ಅಲಂಕಾರ, ಸೋಲುವಿಕೆ ಅವರ ಮಮಕಾರ ಎಂದರು. ನಾಟಕ ರಂಗ, ಸಾಹಿತ್ಯ ರಂಗ ಹಾಗೂ ನಮ್ಮ ಬದುಕು ಕಳೆದ ೬೦ ವರ್ಷಗಲ್ಲಿ ಯಾವದ್ಯಾವುದೋ ಮಗ್ಗಲುಗಳಲ್ಲಿ ಬೇರೆಯೆ ಫಸಲನ್ನು ಪಡೆದುಕೊಂಡಂತಹ ಸಂದರ್ಭದಲ್ಲಿ ಕೆಳ ವರ್ಗಗಳು, ಶೋಷಿತ ವರ್ಗಗಳು ಎಚ್ಚರವಾಗಿವೆ, ಶಿಕ್ಷಣದತ್ತ ಮುಖಮಾಡುತ್ತಿವೆ, ಕಲೋಪಾಸನೆಯನ್ನು ತಮ್ಮದಾಗಿಸಿಕೊಳ್ಳಲು ಹಂಬಲಿಸುತ್ತಿವೆ. ಇಂತಹ ವಾತಾವರಣದಲ್ಲಿ ಕೆ.ವೈ.ಎನ್ ದಾರಿದೀಪವಾಗಿ ನಾಟಕ, ಶಿಕ್ಷಣ, ಕಲಾರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಒಂದು ಸಮುದಾಯವನ್ನು ಪ್ರಭಾವಿಸಬಲ್ಲ ದೊಡ್ಡ ಶಕ್ತಿಯಿದೆ, ಆದಕಾರಣ ಇವರೂ ಕೂಡ ಬ್ಲೂ ಟೂತ್ ಇದ್ದಹಾಗೆ. ಕೆ.ವೈ.ಎನ್ ನಮ್ಮ ನಾಟಕ ರಂಗದ,  ದೇಸಿ ಸಂಸ್ಕೃತಿಯ "ಗ್ರೀನ್ ಟೂತ್" ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ತರಹ ಮನರಂಜನೀಯವಾಗಿದೆ, ಅವಿರತದ ಈ ಕಾರ್ಯ ಅದ್ಭುತ ಎಂದು ಅಭಿನಂದಿಸಿದರು.

ಕೆ.ವೈ.ಎನ್ ವಿವಿಧ ರಂಗದ ಸ್ನೇಹಿತರು ಅವರ ಕುರಿತಾದ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಎಲ್ಲರೊಡನೆ ಹಂಚಿಕೊಂಡರು. ಕಾರ್ಯಕ್ರಮವನ್ನು ನಡೆಸಿಕೊಟ್ಟ ಶಶಿಧರ, ಮೇಷ್ಟ್ರು ಜೀವನದ ಹಲವು ಸ್ವಾರಸ್ಯಕರ ಘಟನೆಗಳನ್ನು ಆಗಾಗ ಬಿಚ್ಚಿಟ್ಟು, ತಿಳಿ ಹಾಸ್ಯದೊಂದಿಗೆ ವೀಕ್ಷಕರನ್ನು ರಂಜಿಸಿದರು

ಕಾರ್ಯಕ್ರಮದ ಕೇಂದ್ರ ಬಿಂದು ಕೆ.ವೈ.ಎನ್ ಮಾತಾಡಿ, ಅವರ ಬೆಳವಣಿಗೆಯಲ್ಲಿ ಗುರುಗಳ, ಸ್ನೇಹಿತರ ಪಾತ್ರವನ್ನು ವಿವರಿಸಿ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು. "ದೊಡ್ಡ ಮಾತಿನ ಬಲೂನು ಉಬುವಾಗ ತಾಗಲಿ ನಿಜದ ಸೂಜಿಮೊನೆ" ಎಂಬ ಹಿತನುಡಿಯೊಂದಿಗೆ, ಅವಿರತ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿರುವ ಬಹು ದೊಡ್ಡ ತಂಡ. ಇಂತಹ ತಂಡದ ಜೊತೆ ನಾನು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ ಮತ್ತು ಅವರ ನಿಷ್ಕಾರಣ ಪ್ರೀತಿಗೆ ವಿಶ್ವಾಸಕ್ಕೆ ನಾನು ಋಣಿ ಎಂದರು.

ಒಟ್ಟಿನಲ್ಲಿ ಕನ್ನಡಕ್ಕೆ ಮತ್ತೊಂದು ಸದಭಿರುಚಿಯ ಕಾರ್ಯ ಕೊಟ್ಟ ಸಂತಸ ನಮ್ಮದಾಯಿತೆನ್ನುವುದರಲ್ಲಿ ಸಂಶಯವಿಲ್ಲ. ಈ ರಂಗ-ಗೀತ ಸಂಭ್ರಮಕ್ಕೆ ಪ್ರೋತ್ಸಾಹಿಸಿದ ಎಲ್ಲರಿಗೂ ಅವಿರತದ ಹೃತ್ಪೂರ್ವಕ ನಮನಗಳು.

ರವಿ ಕುಲಕರ್ಣಿ,

ಅವಿರತ ಪ್ರತಿಷ್ಟಾನ

Friday, July 15, 2016

ಅವಿರತ ಉಚಿತ ನೋಟ್ ಪುಸ್ತಕ ವಿತರಣೆ: ಒಂದು ಅಳಿಲು ಸೇವೆಯ ಸುತ್ತಾ...

ಒಂದು ಅಳಿಲು ಸೇವೆಯ ಸುತ್ತಾ:
ನಗರಗಳಲ್ಲಿ ವೆಚ್ಚ ಭರಿಸಲಾಗದೆ ಶಿಕ್ಷಣ ಹೊರೆಯಾಗುತ್ತಿದ್ದರೆ, ದೂರದ ಹಳ್ಳಿಗಳಲ್ಲಿ ಬಡತನ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಿಕ್ಷಣ, ಶಾಲೆಗಳು ಮರೆಯಾಗುತ್ತಿವೆ. 
'ಪ್ರಾಥಮಿಕ ಶಿಕ್ಷಣ, ಮಕ್ಕಳ ಮೂಲಭೂತ ಹಕ್ಕು' ಎಂಬ ಕಾನೂನು ರಚಿಸಿರುವ ಭಾರತ ಸರ್ಕಾರ, ಶಿಕ್ಷಣವನ್ನು ಸರ್ವವ್ಯಾಪಿಗೊಳಿಸಲು ಹಾಗೂ ಸಾಕ್ಷರತೆಯನ್ನು ಸಾಧಿಸಲು, ಮಕ್ಕಳನ್ನು ಶಾಲೆಗೆ ಮರಳಿ ಕರೆ ತರಲು 'ಸರ್ವ ಶಿಕ್ಷಣ ಅಭಿಯಾನ', 'ಮಧ್ಯಾಹ್ನದ ಬಿಸಿಯೂಟ', 'ಅಂಗನವಾಡಿ', 'ಸೈಕಲ್ ವಿತರಣೆ' ಹೀಗೆ ಹತ್ತು ಹಲವು ಯೋಜನೆಗಳನ್ನೂ ಹಮ್ಮಿಕೊಂಡಿವೆ. ಈ ಎಲ್ಲಾ ಕಾರ್ಯಕ್ರಮ ಹಾಗೂ ಯೋಜನೆಗಳ ಹೊರತಾಗಿಯೂ, ಗ್ರಾಮೀಣ ಶಿಕ್ಷಣ ವ್ಯವಸ್ಥೆಯು ಉತ್ತಮ ಶಿಕ್ಷಕರ ಕೊರತೆ, ಪೀಠೋಪಕರಣದ ಕೊರತೆ, ಅನಾನುಕೂಲಕರವಾದ ಕಟ್ಟಡ, ತರಗತಿಗಳು, ತಂತ್ರಜ್ಞಾನದ ಕೊರತೆ, ಶೌಚಾಲಯದ ಕೊರತೆ ಹೀಗೆ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿವೆ ಮತ್ತು ಇವೇ ಸವಾಲುಗಳು ಹಲವಾರು ಮಕ್ಕಳನ್ನು ಶಾಲೆಯಿಂದ, ಶಿಕ್ಷಣದಿಂದ ದೂರಮಾಡಿದೆ. ಈ ಎಲ್ಲಾ ಸವಾಲು/ಕೊರತೆಗಳ ಕಾರಣದಿಂದ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗದಂತೆ ಮಾಡುವಲ್ಲಿ ಸರ್ಕಾರಕ್ಕಿರುವಷ್ಟೇ ಜವಾಬ್ದಾರಿ ಸರ್ಕಾರೇತರ ಸಂಸ್ಥೆಗಳಿಗೂ ಇದೆ. 
ಈ ದಿಕ್ಕಿನಲ್ಲಿ, ಗ್ರಾಮೀಣ ಶಿಕ್ಷಣ ಅಭಿವೃದ್ದಿಯನ್ನು ತನ್ನ ಕಾರ್ಯಕ್ಷೇತ್ರದ ಪ್ರಮುಖ ಅಂಶವನ್ನಾಗಿಸಿಕೊಂಡಿರುವ 'ಅವಿರತ ಪ್ರತಿಷ್ಠಾನ ' ಎಂಬ ಸರ್ಕಾರೇತರ ಸಂಸ್ಥೆ, ಸೊರಗುತ್ತಿರುವ ಗ್ರಾಮೀಣ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಭ್ಯಸಿಸಿ, ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಆಯಾಮವನ್ನೇ ಸೃಷ್ಟಿಸುವ ಪ್ರಯತ್ನದಲ್ಲಿದೆ.
ಕನ್ನಡ ನಾಡು, ನುಡಿ, ಸಂಸ್ಕೃತಿ ಯನ್ನು ಎತ್ತಿ ಹಿಡಿಯುತ್ತಾ, ಕನ್ನಡಿಗರ ಪರಿಸರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಮೌಲ್ಯಯುತ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಉತ್ಸಾಹದ ಯುವಪಡೆಯೇ ಅವಿರತ ಪ್ರತಿಷ್ಠಾನ. ೨೦೦೭ರ ಮಾರ್ಚ್ ನಲ್ಲಿ ಆರಂಭವಾದ ಅವಿರತ ಪ್ರತಿಷ್ಠಾನವು ಶಿಕ್ಷಣ, ತರಬೇತಿ, ಆರೋಗ್ಯ, ಕಲೆ-ಸಾಹಿತ್ಯ, ಮಹತ್ವ ವಿಷಯಗಳ ಚಿಂತನೆ, ವಿಚಾರ ಗೋಷ್ಠಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿಗಾಗಿ ನಿರಂತರ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ನಾಡಿನ ಸಮತೋಲನ ಅಭಿವೃದ್ದಿಗಾಗಿ ಮೌಲ್ಯಯುತ ಮತ್ತು ತರ್ಕಬದ್ದ ಸಂಘಟನೆಯಾಗಿ ಶ್ರಮಿಸುತ್ತಿರುವ ಅವಿರತ ಪ್ರತಿಷ್ಠಾನವು, ವೈದ್ಯರು, ಸಾಫ್ಟ್ ವೇರ್ ತಂತ್ರಜ್ಣರು, ಶಿಕ್ಷಕರು, ವಕೀಲರು, ಪತ್ರಕರ್ತರು, ಕಲಾವಿದರು,
ಸಾಹಿತಿಗಳನ್ನೊಳಗೊಂಡಿದ್ದು, ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.

'ಹಣತೆಯ ಅಡಿಯಲ್ಲೇ, ಕತ್ತಲೆಯ ತವರು' ಎನ್ನುವ ಕವಿವಾಣಿಯಂತೆ, ಮಹಾನಗರದ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲೇ ಬರುವ, ಇಲ್ಲೇ ಮೂಲೆಯಲ್ಲಿರುವ ಹಳ್ಳಿಯದು. ಕೆಲವು ವರ್ಷಗಳ ಹಿಂದೆ, ಕುತೂಹಲಕ್ಕಾಗಿಯೋ ಅಥವಾ ದಾರಿ ತಪ್ಪಿಯೋ ಅವಿರತದ ಕೆಲವು ಸದಸ್ಯರು ಈ ಹಳ್ಳಿಗೆ ಅಚಾನಕ್ಕಾಗಿ ಭೇಟಿ ನೀಡಿವಂತಾಯಿತು. ಅಲ್ಲಿ ಕಾಣಿಸಿಕೊಂಡ ದೃಶ್ಯಗಳು, ತಿಳಿದುಕೊಂಡ ವಿಷಯಗಳು, ಹುಟ್ಟಿಕೊಂಡ ಯೋಚನೆಗಳು ಮುಂದೆ ದೊಡ್ಡ ಯೋಜನೆಯಾಗಿ, ಅವಿರತ ತಂಡದ ವಾರ್ಷಿಕ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತದೆಯೆಂದು ಅವರಿಗಿನ್ನೂ ತಿಳಿದಿರಲಿಲ್ಲ.
ಕುಗ್ರಾಮವಲ್ಲದೇ ಇದ್ದರೂ, ಆರ್ಥಿಕವಾಗಿ ಬೆಳೆದಿಲ್ಲದ ಹಳ್ಳಿಯದು. ದಿನಗೂಲಿಯನ್ನು ನಂಬಿರುವ ಜನರಿರಬೇಕು; ಸುತ್ತಲೂ ಗುಡಿಸಲಿನ ಮನೆಗಳು, ನಡುವೆಯೊಂದು ಚೆಂದದ ಕಾಂಕ್ರೀಟ್ ಕಟ್ಟದ ಸರ್ಕಾರಿ ಶಾಲೆ. ಶಾಲೆಗೆ ಹೋಗುವ ಮಕ್ಕಳಿಗೆ ಓದುವ ಉತ್ಸಾಹವಿದ್ದರೂ, ಊಟ, ಬಟ್ಟೆ, ಪುಸ್ತಕ ಸಿಕ್ಕರೂ ಸರಿಯಾದ ಪ್ರೋತ್ಸಾಹವಿಲ್ಲದೆ ಅವರ ಶಿಕ್ಷಣಾಭ್ಯಾಸ ಸಮರ್ಪಕವಾಗಿರಲಿಲ್ಲ. ಶಾಲೆಯ ಉಪಾಧ್ಯಾಯರೊಂದಿಗೆ ಚರ್ಚಿಸಿ, ಮಕ್ಕಳೊಂದಿಗೆ ಬೆರೆತು, ಅಲ್ಲಿನ ಅವಶ್ಯಕತೆಯನ್ನು ಅರಿತ ತಂಡದ ಸದಸ್ಯರು ಮಕ್ಕಳಿಗೆ ಓದಿನ ಮಹತ್ವ ತಿಳಿಸಿ, ಎಲ್ಲಾ ಮಕ್ಕಳಿಗೆ ಸ್ಪೋರ್ಟ್ಸ್ ಕಿಟ್ ಅನ್ನು ಕೊಟ್ಟು ಓದಲು ಹುರಿದುಂಬಿಸಿ ಬಂದರು. 
ಹಿಂದುರಿಗಿ ಬಂದವರು, ತಾವು ಮಾಡಿದ ಸಹಾಯವನ್ನು ಕೊಂಡಾಡಿಕೊಂಡು, ಆ ಹಳ್ಳಿಯ, ಶಾಲೆಯ ಸ್ಥಿತಿಯನ್ನು ನೆನೆದು ಮರುಗಿ ಸುಮ್ಮನಾಗಲಿಲ್ಲ. ಮಹಾನಗರದ ಸುತ್ತಮುತ್ತ ಅಂಥದ್ದೇ ಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಗುರುತಿಸಿದರು. ಶಾಲಾ ಮುಖ್ಯಸ್ಥರೊಂದಿಗೆ ಚರ್ಚಿಸಿ ಅಲ್ಲಿನ ಅವಶ್ಯಕತೆಗಳನ್ನು, ಅಸಹಾಯಕತೆಯನ್ನು ತಿಳಿದುಕೊಂಡರು; ತಮ್ಮ ತಂಡದ ಸದಸ್ಯರ, ಅವರ ಸ್ನೇಹಿತರ, ಸಂಬಂಧಿಗಳ ತನು, ಮನ, ಧನ ಸಹಾಯದೊಂದಿಗೆ ಈ ಎಲ್ಲಾ ಶಾಲೆಗಳ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಶೈಕ್ಷಣಿಕ ವರ್ಷಕ್ಕಾಗುವಷ್ಟು ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಯೋಜನೆ ರೂಪಿಸಿದರು. 
ಹೀಗೆ, ಶಾಲೆಯೊಂದರ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಶುರುವಾದ ಸಣ್ಣ ಕೆಲಸ, ಇಂದು ದೊಡ್ಡ ಯೋಜನೆಯಾಗಿ ನೂರಾರು ಶಾಲೆಗಳನ್ನು ತಲುಪಿದೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಶಾಲೆಗೆ ಸೇರುವ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಿರುವ ಹೆಮ್ಮೆಯೂ ಈ ಯೋಜನೆಗೆ ಉಂಟು. ಅಲ್ಲದೇ, ಅವಿರತ ತಂಡವೂ ಸಹ ತನ್ನ ನಿರಂತರ ಸಕ್ರಿಯತೆಯಿಂದ ಈ ಯೋಜನೆಯ ವ್ಯಾಪ್ತಿಯನ್ನು ದೂರದ ಗಡಿ ಪ್ರದೇಶದ ಹಳ್ಳಿಗಳವರೆಗೂ, ಮಲೆನಾಡಿಗೂ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ವರೆಗೂ ವಿಸ್ತರಿಸಿಕೊಂಡಿದೆ.

ಪ್ರತಿ ತರಗತಿಯ ವಿದ್ಯಾರ್ಥಿಗೂ ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್ ಪುಸ್ತಕಗಳೆಷ್ಟು?! ಎಂಬುದನ್ನು ವೈ ಜ್ಞಾನಿಕವಾಗಿ ಅಭ್ಯಸಿಸಿ, ಅವುಗಳನ್ನು ಆಕರ್ಷಣೀಯವಾಗಿ ಮುದ್ರಿಸಿ, ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ (ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ) ವಿದ್ಯಾರ್ಥಿಗಳಿಗೆ ನೇರವಾಗಿ ತಲುಪಿಸುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಅವಿರತ ತನ್ನದಾಗಿಸಿಕೊಳ್ಳುವುದೇ ಈ ಯೋಜನೆಯ ವಿಶಿಷ್ಟತೆ ಹಾಗೂ ಯಶಸ್ವಿಗೆ ಕಾರಣವಾಗಿದೆ. ಜೊತೆಗೆ, ಹೀಗೆ ಮಾಡುವುದರಿಂದ ದಾನಿಗಳಿಗೆ ಅವಿರತದ ಕೆಲಸಗಳಲ್ಲಿ ಪಾರದರ್ಶಕತೆಯನ್ನು ಒದಗಿಸಿದಂತೆಯೂ ಆಗುತ್ತದೆ
'ನನ್ನ ಶಾಲೆ - ನನ್ನ ಹೆಮ್ಮೆ' ಎಂಬ ಚಿಂತನೆಯಡಿಯಲ್ಲಿ ಒಂದು ಶಾಲೆಯ ಉಸ್ತುವಾರಿ ವಹಿಸಿಕೊಂಡ ಸದಸ್ಯರ ಉಪತಂಡವು, ಪುಸ್ತಕ ವಿತರಣೆಗೆ ಬೇಕಾದ ಖರ್ಚು-ವೆಚ್ಚಗಳನ್ನು ಸ್ವತಂತ್ರವಾಗಿ ಕ್ರೋಢೀಕರಿಸಿತ್ತದೆ. ಹೀಗೆ ಮಾಡುವುದರಿಂದ ಒಂದು ಶಾಲೆಯ ಸಂಪೂರ್ಣ ಜವಾಬ್ದಾರಿ ಆ ತಂಡದ್ದಾಗುತ್ತದೆ ಹಾಗೂ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡು ಕಾರ್ಯಕ್ರಮ ಪರಿಣಾಮಕಾರಿಯಾಗಿದೆ
ಈ ಕಾರ್ಯಕ್ರಮದ ಪರಿಣಾಮ ತಿಳಿದುಕೊಳ್ಳುವುದಕ್ಕೆ, 2016 ರ ನೋಟ್ ಪುಸ್ತಕ ವಿತರಣೆಯ ಅಂಕಿ ಅಂಶಗಳನ್ನು ಗಮನಿಸಿದರೆ ಸಾಕು.
ಯೋಜನಯ ವಿಸ್ತಾರ:
-178 ಶಾಲೆಗಳು
-17 ಜಿಲ್ಲೆಗಳು
-53 ತಾಲ್ಲೂಕುಗಳು
-161 ಹಳ್ಳಿಗಳು
ಯೋಜನಯ ಒಟ್ಟು ವೆಚ್ಚ – 15,00,000 (ಹದಿನೈದು ಲಕ್ಷ)
ಒಟ್ಟು 318 ಸ್ವಯಂ ಸೇವಕರು, 61 ತಂಡಗಳು ರಚಿಸಿಕೊಂಡು ಸುಮಾರು 61 ದಿನಗಳ ಕಾಲ, 132 ವಾಹನಗಳಲ್ಲಿ ಪ್ರತಿ ವಾರಂತ್ಯದಲ್ಲಿ, ಬೆಂಗಳೂರಿನಿಂದ ಒಟ್ಟು 1,20,000 ನೋಟ್ ಪುಸ್ತಕಗಳನ್ನು 178 ಶಾಲೆಗಳ ಸುಮಾರು 18,000 ವಿದ್ಯಾರ್ಥಿಗಳಿಗೆ ತಲುಪಿಸಿದ್ದಾರೆ.


ಶಿಕ್ಷಣ, ಕಲೆ, ಸಂಸ್ಕೃತಿ, ಆರೋಗ್ಯ,ಪರಿಸರ ಕ್ಷೇತ್ರಗಳಲ್ಲಿ ನಾಡಿಗಾಗಿ ಏನಾದರೂ ಮಾಡಬೇಕು ಎಂದು ಕನವರಿಸುವ ಜನಕ್ಕೆ, ತುಡಿಯುವ ಮನಕ್ಕೆ ಅವಿರತ ಪ್ರತಿಷ್ಠಾನ ಸೂಕ್ತವಾದ ಸಂಸ್ಥೆ / ತಂಡ.

ಕೇವಲ ಹಣವನ್ನು ಕೊಟ್ಟು, ಕೆಲಸವನ್ನು ಬೇರೊಬ್ಬರಿಗೆ ವಹಿಸಿವುದಕ್ಕೂ ಮೀರಿದ ಆಕರ್ಷಣೆ, ಅರ್ಪಣೆಯನ್ನು ಅವಿರತದ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ. ಕೈಗೊಳ್ಳುವ ಯಾವುದೇ ಕೆಲಸವನ್ನು ಕಾಳಜಿಯಿಂದ ಎದೆಗವುಚಿಕೊಂಡು ಮಾಡುವ ಅವಿರತ, ಸಾಧನೆ ಮಾಡಿರುವವರಿಂದ ಪ್ರೇರಣೆ ಪಡೆದಿರುವ ತಂಡ; ಸಾಧನೆಗೆ ಮಿತಿಯಿಲ್ಲ ಎಂಬುದನ್ನು ಅರಿತಿರುವ ತಂಡ.
ತಾನು ನಂಬಿರುವುದೇ ಸತ್ಯವೆಂದು ತಿಳಿಯದ ಅವಿರತ ಪ್ರತಿಷ್ಠಾನ ತಾನು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಆಗಾಗ ಪರಿಶೀಲನೆಗೊಳಪಡಿಸಿ, ಹಿರಿಯರ ನಿರ್ದೇಶನವನ್ನು, ಕಿರಿಯರ ಸಲಹೆಗಳನ್ನೂ ಪರಿಗಣಿಸಿ, ಕಾಲ ಕಾಲಕ್ಕೆ ತನ್ನ ಯೋಜನೆಗಳನ್ನು,ಕಾರ್ಯಕ್ರಮಗಳನ್ನು ಪರಿಷ್ಕರಿಸುತ್ತಿರುವುದರಿಂದಲೇ ಅಲ್ಲಿ ಸದಾ ಹೊಸಹುಮ್ಮಸ್ಸು, ಲವಲವಿಕೆ, ಚೈತನ್ಯ ಮೂಡಿರುತ್ತದೆ. ಈ ಶಕ್ತಿ, ಸಾಮರ್ಥ್ಯವು ತಂಡದಲ್ಲಿ ಸದಾ ಜೀವನದಿಯಂತೆ ಹರಿಯುತಿರಲಿ, ಅದರ ಫಲ ನಿರಂತರವಾಗಿ ನಾಡಿಗೆ ದೊರೆಯುವಂತಾಗಲಿ…

ನೋಟ್ ಪುಸ್ತಕ ವಿತರಣೆಯ ಛಾಯಾಚಿತ್ರಕ್ಕಾಗಿ ಕೆಳಗಿನ ಕೊಂಡಿ ನೋಡಿ.