ನವೆಂಬರ್ ೨೭, ರವಿವಾರದಂದು ರಂಗ ಸಂಭ್ರಮಕ್ಕೆ ಪ್ರಭಾತ
ರಂಗಮಂದಿರ ಸಾಕ್ಷಿಯಾಯಿತು. ಹೌದು, ಅವತ್ತು ನಡೆದಿದ್ದು
ಕೆ.ವೈ.ಎನ್ ರಂಗಗೀತೆ & ನಾಟಕ ಪುಸ್ತಕಗಳ ಬಿಡುಗಡೆ
ಮತ್ತು ರಂಗಗೀತೆಗಳ ಸಂಗೀತ ಸಂಜೆ. ಈ
ವಿಶೇಷ ಸಂಜೆಗೆ ಅವಿರತವು ಕಾರಣವೆನ್ನುವುದು
ನಮ್ಮ ಹೆಮ್ಮೆ.
ಸುಪರಿಚಿತ
ನಾಟಕಕಾರ, ಸಾಹಿತಿ ಮೇಷ್ಟ್ರು ಕೆ.ವೈ. ನಾರಾಯಣಸ್ವಾಮಿಯವರ ರಂಗ ಹಾಡುಗಳು
ನಾಟಕಗಳಿಗೆ ಹೊಸ ಜೀವಂತಿಕೆ, ಲವಲವಿಕೆಯನ್ನು
ಹಾಗೂ ಮಿಂಚನ್ನೂ ತಂದುಕೊಟ್ಟಂತಹವು. ಅವರ ನಾಟಕಗಳು ಕನ್ನಡ
ರಂಗಭೂಮಿಗೆ ಹೊಸ ಆಯಾಮವನ್ನು ತಂದು
ಕೊಟ್ಟಿವೆ. ಕೆ.ವೈ.ಎನ್
ಅವರ ಈವರೆಗಿನ ಎಲ್ಲಾ ರಂಗಗೀತೆಗಳು
ಮತ್ತು ಅವರ ನಾಟಕಗಳಾದ ಅನಭಿಜ್ಞ
ಶಾಕುಂತಲ, ಪಂಪಭಾರತ ಹಾಗೂ ಚಕ್ರರತ್ನ
ಕೂಡಾ ಪುಸ್ತಕಗಳಾಗಿ ಅರ್ಪಿತವಾದವು. ಪುಸ್ತಕ
ಬಿಡುಗಡೆಯ ಸಾಂಪ್ರದಾಯಿಕ ವಿಧಾನವನ್ನು ಮುರಿದು ವಿಶೇಷಿತವಾದ ಸಂಗೀತ ಸಂಜೆಯ ನಡುವೆ ರಂಗ ಸಜ್ಜೆಯಲ್ಲಿ
ನಾಟಕಕಾರರು, ನಿರ್ದೇಶಕರು, ಸಂಗೀತಗಾರರು, ನಟರು, ವಿಮರ್ಶಕರು ಹಾಗೂ ರಂಗಾಭಿಮಾನಿಗಳ ಉಪಸ್ಥಿತಿಯಲ್ಲಿ
ರಂಗಗೀತೆ ಮತ್ತು ನಾಟಕ ಪುಸ್ತಕಗಳು ಲೋಕಾರ್ಪಣೆಯಾದವು.
ಗೋಪಾಲ
ವಾಜಪೇಯಿಯವರ ಯಾವ ದೇಶದ ರಮಣ ಬಂದು ಏನ ಮೋಸವ ಮಾಡಿದ ಗೀತೆಯೊಂದಿಗೆ ಶುರುವಾಗಿ, ಮೈಸೂರು ರಾಜ್ಯದ ದೊರೆಯೆ,
ನ್ಯಾಸ್ತಾನೆ ನೆಲ ಬಾಲನೆ, ಕನ್ನಡಿಯೇ ಮಾಯಾ ಕನ್ನಡಿಯೇ, ನಂಬಿದ ದಡಗಳೆ, ಶ್ರೀ ಗಣರಾಯ ಶರಣು ಶರಣು,
ಅಸ್ತಂಗತ ಸೂರ್ಯ, ನನ್ನೊಳಗೂ ಇತ್ತೇನೋ, ಸೂಜಿಯೇ ಓ ಸೂಜಿಯೇ, ಗಜವದನ ಹೇ ರಂಭಾ, ಮಾಯದೊ ಮನದ ಭಾರ,
ಆಕಾಶವೆಂಬುದು ಮಾಯಾ ಮಂಟಪ ಮುಂತಾದ ಮೋಹಕ ಹಾಡುಗಳ ರಸದೌತಣವನ್ನು ರಾಮಚಂದ್ರ ಹಡಪದ್ ಮತ್ತು ಅನನ್ಯ
ಭಟ್ ತಂಡ ಭರ್ಜರಿಯಾಗಿ ಉಣಬಡಿಸಿತು.
ಕೆ.ವೈ.ಎನ್
ಗೆ ಅನಿರೀಕ್ಷಿತವಂತೆ, ಅವರ ಮಗಳು ಸುವ್ವಿ ಮಾತಾಡಿ ಅಪ್ಪನ ಜೊತೆಗಿನ ಪ್ರೀತಿ, ಒಡನಾಟ, ಬೆಳಿಸಿದ ಪರಿ
ಅಲ್ಲದೆ ಹುಟ್ಟು ಹಬ್ಬಕ್ಕೆ ಅಪ್ಪ ಬರೆದ ಒಲವಿನ ಮಮತೆಯ ಪತ್ರವನ್ನು ಸಭೆಯೊಂದಿಗೆ ಹಂಚಿಕೊಂಡು ಸಂಭ್ರಮಿಸಿ
ಅಪ್ಪನಿಗೆ ಶುಭ ಕೋರಿದರು.
ನಾಟಕಕಾರ
ನಾರಾಯಣ ರಾಯಚೂರು ಪುಸ್ತಕದ ಬಗ್ಗೆ ಮಾತಾಡಿ, ಕೆ.ವೈ.ಎನ್ ಬಳಸುವ ಪದಗಳು, ಪ್ರತಿಮೆಗಳು ಮತ್ತು ಸಾಂದರ್ಭಿಕತೆ
ನಾಟಕದ ಹಾಡುಗಳಿಗೆ ಇರಬೇಕಾದ ಚೌಕಟ್ಟು ಅತ್ಯಂತ ಪರಿಪೂರ್ಣವಾಗಿವೆ. ಪನ್ ಬಳಕೆಯಲ್ಲೂ ಅವರು ಕೆಲಸ ಮಾಡಿರುವುದು
ಸಂತೋಷದ ವಿಷಯ. ಗೀತ ಸಂಗೀತಗಳು ಪ್ರದರ್ಶಕ ಕಲೆಯ ಭಾಗವಾಗಿವೆ
ಅಲ್ಲದೆ ರಂಗಭೂಮಿಯು ಕೂಡ ಅವನ್ನು ಸಮೃದ್ಧಗೊಳಿಸಿವೆ. ೧೯೮೮-೮೯ ರಲ್ಲಿ ಮೊದಲ ಬಾರಿಗೆ ರಂಗಗೀತೆಗಳ
ಸಂಗ್ರಹ ಹೊರ ತರುವ ಪ್ರಯತ್ನವಾಗಿತ್ತು. ಉತ್ತರ ಕರ್ನಾಟಕದಲ್ಲಿಯ ವೃತ್ತಿ ರಂಗಭೂಮಿಯ ಅನೇಕರ ರಂಗಗೀತೆಗಳು
ಒಟ್ಟುಗೂಡಿ ಸಂಗ್ರಹ ಕೂಡ ಬಂದಿದೆ. ಆದರೆ ರಂಗಗೀತೆಗಳ ಪುಸ್ತಕದ ಇತಿಹಾಸದಲ್ಲಿ ಒಂದೇ ವ್ಯಕ್ತಿಯ ರಂಗಗೀತೆಗಳ
ಪುಸ್ತಕ ಹೊರತಂದಿರುವ ವಿನೂತನ, ಅಪರೂಪದ ಪ್ರಯತ್ನ ಇದೆ ಮೊಟ್ಟ ಮೊದಲು ಎಂದ ಅವರು, ಇಂತಹ ವಿಶೇಷಕ್ಕೆ
ಹೆಜ್ಜೆ ಇಟ್ಟ ಅವಿರತವನ್ನು ಶ್ಲಾಘಿಸಿದರು.

ಕೆ.ವೈ.ಎನ್
ರ ವಿವಿಧ ರಂಗದ
ಸ್ನೇಹಿತರು ಅವರ ಕುರಿತಾದ ತಮ್ಮ
ಅಭಿಪ್ರಾಯ, ಅನಿಸಿಕೆಗಳನ್ನು ಎಲ್ಲರೊಡನೆ ಹಂಚಿಕೊಂಡರು. ಕಾರ್ಯಕ್ರಮವನ್ನು ನಡೆಸಿಕೊಟ್ಟ ಶಶಿಧರ, ಮೇಷ್ಟ್ರು ಜೀವನದ
ಹಲವು ಸ್ವಾರಸ್ಯಕರ ಘಟನೆಗಳನ್ನು ಆಗಾಗ ಬಿಚ್ಚಿಟ್ಟು, ತಿಳಿ
ಹಾಸ್ಯದೊಂದಿಗೆ ವೀಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದ
ಕೇಂದ್ರ ಬಿಂದು ಕೆ.ವೈ.ಎನ್ ಮಾತಾಡಿ, ಅವರ ಬೆಳವಣಿಗೆಯಲ್ಲಿ ಗುರುಗಳ, ಸ್ನೇಹಿತರ ಪಾತ್ರವನ್ನು ವಿವರಿಸಿ
ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು. "ದೊಡ್ಡ ಮಾತಿನ ಬಲೂನು ಉಬುವಾಗ ತಾಗಲಿ ನಿಜದ ಸೂಜಿಮೊನೆ"
ಎಂಬ ಹಿತನುಡಿಯೊಂದಿಗೆ, ಅವಿರತ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿರುವ
ಬಹು ದೊಡ್ಡ ತಂಡ. ಇಂತಹ ತಂಡದ ಜೊತೆ ನಾನು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ ಮತ್ತು ಅವರ ನಿಷ್ಕಾರಣ
ಪ್ರೀತಿಗೆ ವಿಶ್ವಾಸಕ್ಕೆ ನಾನು ಋಣಿ ಎಂದರು.
ಒಟ್ಟಿನಲ್ಲಿ
ಕನ್ನಡಕ್ಕೆ ಮತ್ತೊಂದು ಸದಭಿರುಚಿಯ ಕಾರ್ಯ ಕೊಟ್ಟ ಸಂತಸ
ನಮ್ಮದಾಯಿತೆನ್ನುವುದರಲ್ಲಿ ಸಂಶಯವಿಲ್ಲ. ಈ ರಂಗ-ಗೀತ ಸಂಭ್ರಮಕ್ಕೆ ಪ್ರೋತ್ಸಾಹಿಸಿದ ಎಲ್ಲರಿಗೂ ಅವಿರತದ
ಹೃತ್ಪೂರ್ವಕ ನಮನಗಳು.
ರವಿ
ಕುಲಕರ್ಣಿ,
ಅವಿರತ
ಪ್ರತಿಷ್ಟಾನ
No comments:
Post a Comment