Monday, June 1, 2015

"ಅವಿರತ ವನಮಹೋತ್ಸವ"

ಉಸಿರಾಡುವ ಗಾಳಿಗೂ ಹಸಿರಿನ ನೆರವು ಬೇಕು; ತಂಪಾಗಿರಲು ಬೇರು ಬಿಟ್ಟ ಮರಗಳ ನೆರಳಿರಬೇಕು.

ಇಂದಿನ ನಮ್ಮೆಲ್ಲರ ನಗರ ಕೇಂದ್ರಿತ ಆಡಂಬರದ ಜೀವನ ಶೈಲಿ ಮತ್ತು ನಿಸರ್ಗದ ನಿಯಮಗಳಿಗೆ ವಿರುದ್ದವಾಗಿ ನಾವು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಪ್ರಕೃತಿಯಲ್ಲಿನ ಅಸಮತೋಲನ ಹೆಚ್ಚಾಗಿದೆ. ಭೂಮಿಯ ಒಡಲನ್ನು ಬಗೆದಿರುವ ಹತೋಟಿ ತಪ್ಪಿದ ಗಣಿಗಾರಿಕೆ, ಮಿತಿ ಮೀರಿದ ವಾಹನಗಳ ಬಳಕೆ, ಕಾಡನ್ನು ಕಡಿದು ನಿರ್ಮಿಸಲಾಗುತ್ತಿರುವ ನಗರಗಳು, ಹೀಗೆ ಸುತ್ತಲೂ ಕಣ್ಣಾಡಿಸಿದರೆ ನಮಗೆ ಕಾಣುವುದು ಕೇವಲ ಕಾಂಕ್ರೀಟ್ ಕಾಡು.

ನಿಸರ್ಗದ ಜಲ ಹಾಗೂ ನೆಲದ ಒಡಲಿನಲ್ಲಿರುವ ಸಮಸ್ತ ಜೀವ ಸಂಕುಲದ ಮೇಲೆ ಪರಿಸರ ಅಸಮತೋಲದ ವ್ಯತಿರಿಕ್ತ ಪರಿಣಾಮ ಒಂದಿಲ್ಲೊಂದು ರೀತಿಯಲ್ಲಿ ಆಗುತ್ತಲೇ ಇರುತ್ತದೆ. ಈ ಪರಿಸರ ಅಸಮತೋಲನಕ್ಕೆ ಮನುಷ್ಯನ ಅವಿವೇಕದ ಹೆಜ್ಜೆಗಳೇ ಕಾರಣ, ಸೃಷ್ಟಿಯ ಜೀವಜಾಲದಲ್ಲಿ ವಿಚಾರವಂತನೆನಿಸಿಕೊಂಡ ಮನುಷ್ಯನೇ ಇವುಗಳೆಲ್ಲವನ್ನು ಉಳಿಸುವ ಹೊಣೆ ಹೊರಲೆಬೇಕಾಗಿದೆ. ತನಗೆ ಅರಿವೇ ಇಲ್ಲದಂತೆ, ತನ್ನನ್ನು ತಾನೇ ಹಿಂಸಿಸಿಕೊಳ್ಳುತ್ತಾ, ಇತರೆ ಗಿಡಮರ, ಪ್ರಾಣಿ ಪಕ್ಷಿಗಳನ್ನು ವಿನಾಶದ ಅಂಚಿಗೆ ನೂಕುತ್ತಿರುವ ಮನುಷ್ಯ ಈ ಕ್ಷಣವೇ ಎಚ್ಚೆತ್ತುಕೊಳ್ಳ ಬೇಕಾಗಿದೆ. ಇಲ್ಲದೇ ಹೋದಲ್ಲಿ ಪ್ರಕೃತಿಯಲ್ಲಿ ನಡೆಯುವ ವಿಕೋಪಗಳಿಗೆ ಮನುಷ್ಯ ಮೂಕ ಪ್ರೇಕ್ಷಕನಾಗಿ, ಜೀವ ಸಂಕುಲದ ವಿನಾಶಕ್ಕೆ ಸಾಕ್ಷಿಯಾಗಬೇಕಾಗುತ್ತದೆ.

ಈ ನಿಟ್ಟಿನಲ್ಲಿ, ’ಅವಿರತ ಪ್ರತಿಷ್ಟಾನ’ವು ಪ್ರಕೃತಿಯ ಕರೆಗೆ ಓಗೊಟ್ಟು, ಪರಿಸರ ಸಂರಕ್ಷಣೆಯ ಮಹದಾಕಾಂಕ್ಷೆಯ ಬೆನ್ನೇರಿ, ಎಳೆ ಚಿಗುರುಗಳ ಸವಾರಿ ನಡೆಸಲು, ’ವನ ಮಹೋತ್ಸವ’ ಕಾರ್ಯಕ್ರಮವನ್ನು 'Oracle' ಸಹಯೋಗದೊಂದಿಗೆ ಹಮ್ಮಿಕೊಂಡಿದೆ.

ಇದು ಒಬ್ಬರ ಯೋಚನೆಯೋ, ನೂರು ಜನರ ಆಸೆಯೋ, ಸಾವಿರ ಜನರ ಶ್ರಮವೋ; ಒಟ್ಟಿನಲ್ಲಿ ಸಾಮೂಹಿಕವಾಗಿ ನಡೆಯಲೇ ಬೇಕಾದ ಒಂದು ಹಸಿರು ಕ್ರಾಂತಿ.

ಬನ್ನಿ, ಸ್ವಾರ್ಥದಿಂದಾಲೂ ಸರಿ, ನಿಸ್ವಾರ್ಥದಿಂದಾಲೂ ಸರಿ ಈ ವನ ಮಹೋತ್ಸವದಲ್ಲಿ ಕೈ ಜೋಡಿಸಿ. ನೆನಪಿಡಿ, ಇದು ಕೇವಲ ಹಸಿರಿನ ವಿಷಯವಲ್ಲ, ನಿಮ್ಮ, ನಮ್ಮ, ಈ ಜಗತ್ತಿನ ಜೀವ ಸಂಕುಲದ ಉಸಿರಿನ ವಿಷಯ.

ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ
ದಿನಾಂಕ: 7 ಜೂನ್ 2015,
ಭಾನುವಾರ ಸಮಯ: ಬೆಳಿಗ್ಗೆ 9 ಘಂಟೆ

ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ಅವಿರತ ಪ್ರತಿಷ್ಠಾನ.