Friday, July 25, 2014

ಒಂದು ಮನವಿ - ಐಶ್ವರ್ಯ.ಎಸ್.ಮೂರ್ತಿ

ಹೇ..ಅದು ನಮ್ ಶಾಲೆ ! 

ದಾರೀಲಿ ಹೋಗುವಾಗ ಜೊತೇಲಿ ಇರೋರಿಗೆ ಹೆಮ್ಮೆಯಿಂದ ಗ್ಯಾರಂಟಿ ಹೇಳ್ಕೊಂಡಿರ್ತೀರ..ಒಂದೇ ಶಾಲೇಲಿ ಜೊತೆಗೆ ಓದ್ತಿದ್ದ ಸ್ನೇಹಿತ್ರು ಸಿಕ್ಕಿದ್ರಂತೂ ಮುಗೀತು ಕಥೆ, ನಮ್ಮ್ ಹರಟೆಗೆ ಆರಂಭನೂ ಇರೋಲ್ಲ, ಅಂತ್ಯಾನು ಬೇಕಾಗಿರೋಲ್ಲ.ಶಾಲೆ ಬಗ್ಗೆ ಒಬ್ಬೊಬ್ರಿಗೂ ಒಂದೊಂದು ನೆನಪು. ಬೆಳಿಗ್ಗೆ ಹೇಳ್ತಿದ್ದ ಮಾರುದ್ದದ ಪ್ರಾರ್ಥನೆ,ಶಾಲೆಗೆ ಹೋಗ್ತಾ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟ್ ಗೋಸ್ಕರ ಎಷ್ಟೋ ಜನರ ಜೊತೆ  ಕಿತ್ತಾಡಿದ್ದು, ಶೂ ಪಾಲಿಶ್, ಉಗುರು ಕಟ್ ಮಾಡಿದರೋ ಇಲ್ವೋ, ತಲೆ ನೀಟಾಗಿ ಬಾಚಿದ್ಯೋ ಇಲ್ವೋ ಅಂತ ಚೆಕ್ ಮಾಡೋಕ್ಕೆ ಇರ್ತಿದ್ದ ನಮ್ಮ ಶತ್ರು ಲೀಡರ್ ಗಳ ಮೇಲಿನ ಕೋಪ.... ಯಾರ್ಯಾರು ಏನೇನು ತರ್ಲೆ ಮಾಡಿ ಸಿಕ್ಕಾಕೊಂಡಿದ್ದು, ಯಾರು ಯಾವ್ ಸರ್ ಹತ್ರ ಹೊಡೆಸ್ಕೊಂಡಿದ್ರು..ಒಳ್ಳೊಳ್ಳೆ ಶಿಕ್ಷೆಗಳು ಯಾರ್ಯಾರಿಗ್ ಸಿಕ್ಕಿದ್ವು,ಲಂಚ್ ಬ್ರೇಕ್ ಟೈಮಿನಲ್ಲಿ ಎಲ್ಲಾ ಒಟ್ಟಿಗೆ ಕೂತ್ಕೊಂಡು ಊಟ ಮಾಡ್ತಾ ಇದ್ದದ್ದು..ಮೆಟ್ಟಲುಗಳ ಮೇಲೆ ಕೂತು ಹರಟೆ ಹೊಡೀತಿದಿದ್ದು.....ವಾರಕ್ಕೆ ಒಂದೇ ಸತಿ ಬರ್ತಿದ್ದ ಪಿಟಿ ಪಿರಿಯಡ್ ಗೆ ಕಾಯ್ತಾಯಿದ್ದದ್ದು..ಸ್ಪೋರ್ಟ್ಸ್ ಡೇ, ಶಾಲೆ ವಾರ್ಷಿಕೋತ್ಸವ ಬಂತಂದ್ರೆ ಕ್ಲಾಸ್ ಇರಲ್ಲ ಅನ್ನೋ ಖುಷೀಲಿ ಒಂದ್ ತಿಂಗಳು ಮಜಾ ಮಾಡ್ತಿದಿದ್ದು.ಯಾವ್ ಮೇಡಂ ಚೆನ್ನಾಗ್ ರೆಡಿ ಆಗಿ ಬರ್ತಿದ್ರು ..ಯಾವ್ ಸರ್ ತಮಾಷೆಯಾಗಿ ಮಾತಾಡ್ತಿದ್ರು... ಹೀಗೆ ನಮ್ಮ್ ಶಾಲೆಯ ಆಯಮ್ಮ, ಟೀಚರ್ಸ್, ಹೆಡ್ ಮಾಸ್ಟರ್, ನಮ್ಮ ಕ್ಲಾಸ್, ನಾವು ಕೂತ್ಕೋತಿದ್ದ ಬೆಂಚ್, ಎಲ್ಲವನ್ನು ನೆನಪು ಮಾಡ್ಕೊಂಡು ಸಾಗುವ ನಮ್ಮ ಹರಟೆ ಸಮಯದ ಪರಿವೆ ಇಲ್ದೇ ನಡೆಯುತ್ತೆ.  ಈ ರೀತಿ ಬಾಲ್ಯದ ಶಾಲೆಯ ದಿನಗಳಲ್ಲಿ ನಾವ್ ಮಾಡಿದ್ದ ತಪ್ಪು, ತಲೆಹರಟೆಗಳನ್ನು, ಮಾಡಿದ ಅವಾಂತರಗಳನ್ನ ಬಾಲ್ಯದ ಸ್ನೇಹಿತರೊಂದಿಗೆ ನೆನಪಿಸ್ಕೊಂಡು ಹರಟೋದುತುಂಬಾನೇ ಮಜಾ ಕೊಡುತ್ತೆ ಅಲ್ವಾ?!!! ಆಮೇಲೆ, ಈಗ 100 ಕೆಜಿ ಆಗಿರೋನು ಆಗ ಶಾಲೇಲಿ ನೋಡ್ದಾಗ ಸೊಣಕಲು ಸೌತೇಕಾಯಿ ಥರ ಇದ್ದ ನೆನಪು, ಆಗ ತಲೆಗೆ ಎಣ್ಣೆ ಹಾಕ್ಕೊಂಡು ಎರಡು ಬದನೆಕಾಯಿ ಜಡೆ ಹಾಕೊತಿದ್ದವ್ಳು ಈಗ ಸಖತ್ ಮಾಡೆಲ್ ಆಗಿರ್ತಾಳಂತೆ, ಅನ್ನುವ ಈಗಿನ ಅಂತೆ-ಕಂತೆಗಳು....ಉಫ್!!! ನೋಡಿ, ಶಾಲೆ ಅಂದ ಕೂಡಲೇ ಎಷ್ಟೆಲ್ಲಾ ನೆನಪುಗಳು, ಖುಷಿ, ಉತ್ಸಾಹ.  ಶಾಲೆಯ ನೆನಪುಗಳು ಅಕ್ಷಯ ಪಾತ್ರೆ ಇದ್ದ ಹಾಗೆ.  ಎಷ್ಟೆಲ್ಲಾ ಮಾತಾಡಿದರೂ ಯಾವತ್ತಿಗೂ ಮುಗಿಯದ, ಮಾಸಿಹೋಗದ, ಸದಾ ಕಚಗುಳಿಯಿಡುವ ನೆನಪುಗಳು. ಹೌದು, ಒಂದು ಘಳಿಗೆ ನಾವ್ ಓದಿದ್ ಶಾಲೆ ಬಗ್ಗೆ ಯೋಚಿಸಿದ್ರೆ, 20-30 ವರ್ಷಗಳ ಹಿಂದೆ ನಡ್ದಿರೋ ಇಷ್ಟೊಂದೆಲ್ಲಾ ವಿಷ್ಯಗಳು ಹೇಗೆ ಏಕಾಏಕಿ ನೆನಪಾಗ್ತವೆ? ಯಾಕೆ ಅಂದ್ರೆ ಅವು ನಮ್ಮೆಲ್ಲರ ಜೀವನದಲ್ಲೂ ಅತ್ಯಮೂಲ್ಯ ದಿನಗಳು..ಈಗ ಶಾಲೆ ಮುಗ್ಸಿರೋ ಹುಡ್ಗ ಆಗಿರ್ಲಿ..ಇನ್ನೇನು ರಿಟೈರ್ ಆಗ್ತಿರೋರ್ ಆಗ್ಲಿ, ಎಲ್ಲರಿಗೂ ಶಾಲೆ ಅಂದ್ರೆ ಈ ಕೃತಜ್ಞ ಭಾವ! ’Student / School Life is Golden Life’ ಅನ್ನುವ ಮಾತಿನ ಅರ್ಥ ನಮಗೆ ಅವತ್ತಿಗಿಂತ ಇವತ್ತಿಗೆ ಹೆಚ್ಚು ಅರ್ಥ ಆಗುತ್ತೆ.  ಇವತ್ತು ನಾವು ಪೆನ್ ಹಿಡಿದು ಪುಟಗಟ್ಟಲೆ ಬರೆಯೋ ಆತ್ಮವಿಶ್ವಾಸ ಬಂದಿದ್ದು ಶಾಲೇಲಿ ಸ್ಲೇಟು ಬಳಪ ಕೊಟ್ಟು ನಮ್ಮನ್ನ ತಿದ್ದಿದಕ್ಕೆ..ಮಗ್ಗಿ ಹೇಳ್ದೆ ಇದ್ರೆ ಕೊಡ್ತಿದಿದ್ ಚಡಿಯೇಟಿಂದಾನೇ ಇವತ್ತು ನಮ್ಮಲ್ಲಿ ಎಷ್ಟೊಂದ್ ಜನ ಇಂಜಿನಿಯರ್ರು, ಡಾಕ್ಟ್ರು, ಲಾಯರ್ ಗಳಾಗಿದ್ದಾರೆ..ನೀವ್ ಯಾವ್ದೇ ಒಳ್ಳೆ ಕೆಲಸ ಮಾಡಿ, ಆ ಸಂಸ್ಕಾರ ನಿಮಿಗೆಲ್ಲಿಂದ ಬಂತು ಅಂತ ತಿಳಿದುಕೊಳ್ಳುವುದಕ್ಕೆ ‘ನೀವ್ ಯಾವ್ ಶಾಲೇಲಿ ಓದಿದ್ದು?’ ಅಂತ ಯಾರಾದ್ರೂ ಕೇಳೆ ಕೇಳ್ತಾರೆ..ನಮ್ಮ ಅಕ್ಷರ ಕಲಿಕೆಗೆ ಸೂರಾದ, ಜ್ಣಾನದ ಬೆಳವಣಿಗೆಗೆ ಅಡಿಪಾಯವಾದ, ನಮ್ಮನ್ನು ಇಷ್ಟು ಬೆಳೆಸಿರೋ ಶಾಲೆಗೆ ಹೋಗುವುದಕ್ಕೆ“ಈಗ ಟೈಮೇ ಸಿಗಲ್ಲ ಕಣ್ರೀ” ಅಂತ ನೆಪ ಕೊಡುತ್ತೇವೆ.  ಅದು ಎಲ್ಲೇ ಇರುವ ಶಾಲೆಯಾಗಿರಬಹುದು; ಇದೇ ಸಿಟಿಯಲ್ಲಿರುವ ಶಾಲೆಯಾಗಿರಬಹುದು, ನೀವು ಹುಟ್ಟಿ-ಬೆಳೆದ ಹಳ್ಳಿಯಲ್ಲಿನ ಶಾಲೆಯಾಗಿರಬಹುದು, ನಮಗೆ ಶಾಲೆಗೆ ಹೋಗಲು ಈಗ ಸಮಯವೇ ಇಲ್ಲ ಅನ್ನುವ ಕುಂಟು ನೆಪ ಸದಾ ಸಿದ್ದವಾಗಿರುತ್ತದೆ.ಬದಲಿಗೆ, 365 ದಿನದಲ್ಲಿ ಒಂದೇ ಒಂದು ದಿನ, ನೀವು ಓದಿದಶಾಲೆಗೆ ಹೋಗಿ, ನೀವು ಓದಿದ ಕ್ಲಾಸ್ ರೂಂ ಅಲ್ಲೇ ಈಗ ಕಲೀತಿರೋ ಮಕ್ಕಳಿಗೆ ಅವ್ರೂ ನಿಮ್ಮ ಥರ ಹಳ್ಳಿ ಶಾಲೇಲೇ ಓದಿ ಮುಂದೆ ಬರಬಹುದು ಅನ್ನೋ ವಿಶ್ವಾಸ ತುಂಬಿ ಅವರ ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕಗಳನ್ನ ಅಥವಾ ಇನ್ನಾವುದೇ ಸಹಾಯವನ್ನು ನೀಡುವ ಕಾರ್ಯ ನಿಮ್ಮಲ್ಲಿ ಮೂಡಿಸುವ ಆ ಸಾರ್ಥಕ ಭಾವ, ನಿಮ್ಮ ಮನಸಲ್ಲಿ ನಿಮ್ಮ ಶಾಲೆ ನೆನಪನ್ನ ಇನ್ನೂ ಹಸಿರಾಗಿಸುತ್ತೆ..!ನಿಮ್ಮ ಶಿಕ್ಷಕರಿಗಂತೂ ಇದು ಹೆಮ್ಮೆಯ ಸಂಗತಿಯೇ..”ನನ್ ಸ್ಟೂಡೆಂಟ್ ಈಗ ನಮ್ ಶಾಲೆ ಮಕ್ಕಳಿಗೆ ಸಹಾಯ ಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ” ಅಂತ. ನಮ್ಮ ದುಡಿಮೆಯ ಅಥವಾ ಉಳಿತಾಯದ ಒಂದು ಸಣ್ಣ ಭಾಗವಾದರೂ ಹೀಗೆ ನಮ್ಮ ಶಾಲೆಗೆ ಉಪಯೋಗವಾದರೆ ಅದು ಹಳ್ಳಿಗಾಡಿನ ಮಕ್ಕಳಿಗೆ ದೊಡ್ಡ ಪಾಲು, ಅಲ್ಲವೇ?’ಇದೆಲ್ಲಾ ಆಗುವ ಕೆಲಸಾನ?”  “ಹೇಗೆ ಶುರು ಮಾಡ್ಬೇಕು?” “ಏನು ಮಾಡ್ಬೇಕು?” ಅಂತಾ ಯೋಚಿಸುತ್ತಾ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.  ಈ ಕೆಲಸ ಖಂಡಿತವಾಗಿಯೂ ನಿಮ್ಮಿಂದ ಸಾಧ್ಯ.  ಇದನ್ನು ನಿಮ್ಮಿಂದಲೇ ಸಾಧ್ಯವಾಗಿಸೋಕೆ ’ಅವಿರತ ಸಂಸ್ಥೆ’ ನಿಮ್ಮ ಜೊತೆ ಇದೆ. ಈಗಾಗಲೇ ಕರ್ನಾಟಕದಾದ್ಯಂತ, ನೂರಾರು ಶಾಲೆಗಳಲ್ಲಿ, ಸಾವಿರಾರು ವಿದ್ಯಾರ್ಥಿಗಳಿಗೆ, ಲಕ್ಷಾಂತರ ನೋಟ್ ಪುಸ್ತಗಳನ್ನು ಪ್ರತಿವರ್ಷ ಈ ಸಂಸ್ಥೆ ವಿತರಿಸುತ್ತಿದೆ.ಇವರು ನೇರವಾಗಿ ಮುದ್ರಕರಿಂದಲೇ ಪುಸ್ತಕಗಳನ್ನ ಖರೀದಿಸುವುದರಿಂದ ಶೇಕಡ 50% ರಷ್ಟು ಕಡಿಮೆ ಬೆಲೆಗೆಒಳ್ಳೆ ದರ್ಜೆಯ ಪುಸ್ತಕಗಳೇ ಸಿಗುತ್ತವೆ.  ನೋಟ್ ಪುಸ್ತಕಗಳನ್ನು ವಿತರಿಸಲು ಈ ಸಂಸ್ಥೆ ವೈಜ್ಣಾನಿಕ ಮಾರ್ಗವನ್ನೇ ಅನುಸರಿಸುತ್ತಿದೆ ಎಂಬುದು ಗಮನಾರ್ಹ ಅಂಶ.

ಕುಣಿಗಲ್ ತಾಲ್ಲೂಕು ವಳಗೆರೆಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಇಂಜಿನಿಯರಿಂಗ್ ಮುಗಿಸಿ ಅವಿರತದ ಜೊತೆ ಅದೇ ಶಾಲೆಗೇ ನೋಟ್ ಪುಸ್ತಕ ವಿತರಿಸುತ್ತಿರುವ ವಿನಯ್..
ಇಂದು, ನೀವು ನಿರ್ಭಯರಾಗಿ ಸಮಾಜದ, ಸಮುದಾಯದ ಮುಂದೆ.!
ಒಂದು ಶಾಲೆ ಸಮಾಜದ ಅತಿ ಕಿರಿಯ ಅಂಶ. ನೀವೂ ನಿಮ್ ಶಾಲೆನ ಮರೀಬೇಡಿ, ಅವಿರತದ ಜೊತೆ ಕೈ ಜೋಡಿಸಿ..!

ಶಾಲೆ ಎಂದರೆ ಕೇವಲ ಕಾಂಪೌಂಡು, ಗೋಡೆ, ಕಿಟಕಿ, ಬಾಗಿಲು, ಬೋರ್ಡ್, ಬೆಂಚು, ಬೆಲ್ಲು ಇರುವ ಕಟ್ಟಡವಷ್ಟೇ ಅಲ್ಲ. ಮೊದಲಿಗೆ ಅದೊಂದು ವಾತಾವರಣ, ಆಮೇಲೆ ಅನುಭವ, ಅನಂತರ ಅಚ್ಚಳಿಯದ ನೆನಪು.  ತಂದೆ-ತಾಯಿ, ಕುಟುಂಬದ ಹೊರತಾಗಿ ಈ ಅಪರಿಚಿತ ಸಮಾಜವನ್ನು ಪ್ರತಿಯೊಬ್ಬಮಗುವು ಎದುರುಗೊಳ್ಳುವುದು ಮೊದಲಿಗೆ ಶಾಲೆಯಲ್ಲಿಯೇ!!  ಇಂದು, ನೀವು ಸಹ ಸಮಾಜದ ಭಾಗ.  ಈ ಸಮಾಜದೊಳಗಿನ ನಾಗರಿಕರಾಗಲು ಅ, ಆ, ಇ, ಈ ಕಲಿಸಿದ ನಿಮ್ಮ ಶಾಲೆಯನ್ನ ನೀವು ಮರೆಯಬೇಡಿ.

ಬನ್ನಿ, ಅವಿರತ ಸಂಸ್ಥೆಯ ಜೊತೆಗೂಡಿ, ನಡೆದು ಬಂದ ದಾರಿಯ ನೆನೆಯಿರಿ….!!


-ಐಶ್ವರ್ಯ.ಎಸ್.ಮೂರ್ತಿ

No comments:

Post a Comment