Sunday, January 27, 2013

"ಹೆಜ್ಜೆ ಗೆಜ್ಜೆ" ಅವಿರತದ ೫ನೇ ವಾರ್ಷಿಕೋತ್ಸವ- ರೋಹಿತ್ ಎಚ್. ಎಸ್ ಅವರ ಮೆಲುಕು

ಅವಿರತ ೫ : ಹೆಜ್ಜೆಯ ಮೆಲುಕು....ಗೆಜ್ಜೆಯ ನಾದ......

ಆ ಬಯಲು ರಂಗಮಂದಿರದ ಅಂಗಳದ ತುಂಬಾ ಸಂಭ್ರಮ - ಸಡಗರ, ತಂಪಾದ ನೆರಳಿನಲ್ಲಿ ಕುಳಿತ ಪ್ರೇಕ್ಷಕರು, ಅವರನ್ನು ರಂಜಿಸಲು ಬೆಳಿಗ್ಗೆಯಿಂದ ಸಂಜೆಯವರೆಗು, ಎಲ್ಲಿಯೂ ಎಲ್ಲೆ ಮೀರದ, ನಮ್ಮತನವನ್ನು ಎತ್ತಿ ಹಿಡಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ಹಾಗೆ ರಂಜಿಸಿದವರು ವೃತ್ತಿನಿರತ ಕಲಾವಿದರೂ ಅಲ್ಲ, ನೋಡಲು ಕುಳಿತಿದ್ದ ಪ್ರೇಕ್ಷಕರು ಸಾರ್ವಜನಿಕರೂ ಅಲ್ಲ.    ಅಲ್ಲಿ, ಹಾಡಿ, ಕುಣಿದು, ನಟಿಸಿ, ನೃತಿಸಿ ರಂಜಿಸಿದವರು ಮನೆಯ ಮಕ್ಕಳಾದರೆ, ತಮ್ಮ ಮಕ್ಕಳ ಪ್ರತಿಭೆಯನ್ನು ನೋಡಿ ಆಸ್ವಾದಿಸಿದ್ದು ಮನೆಯ ಹಿರಿಯರು ಹಾಗೂ ಬಂಧು-ಬಳಗದವರು.  
ಮನೆ ಮುಂದಿನ ಅಂಗಳದಲ್ಲಿ ಮನೆಯವರೆಲ್ಲಾ ಸೇರಿದಾಗ ಇರುವಂತಹ ಲವಲವಿಕೆ, ಹಬ್ಬದ ವಾತಾವರಣವೇ ಸೃಷ್ಟಿಯಾದಂತೆ ಕಂಡುಬಂದದ್ದು, ’ಅವಿರತ ಪ್ರತಿಷ್ಟಾನ’ ಆಯೋಜಿಸಿದ್ದ, ತನ್ನ ೫ನೇ ವಾರ್ಷಿಕೋತ್ಸವದ ’ಹೆಜ್ಜೆ-ಗೆಜ್ಜೆ’ ಕಾರ್ಯಕ್ರಮದಲ್ಲಿ.
ಇಂಟರ್ನೆಟ್ಟಿನ ಮೂಲಕ ಪರಿಚಿತರಾದ, ಸಮಾನ ಆಲೋಚನೆಗಳುಳ್ಳ ಕೆಲವು ಪ್ರಜ್ಣಾವಂತ ಯುವಕರು ಹುಟ್ಟುಹಾಕಿದ ಸಮೂಹವು, ಇಂದು ಆ ಇಂಟರ್ನೆಟ್ಟನ್ನೂ ಮೀರಿ ’ಅವಿರತ ಪ್ರತಿಷ್ಟಾನ’ವಾಗಿ ಬೆಳೆದಿದೆ. ತಂತ್ರಜ್ಣಾನ ಹಾಗೂ ಜಾಗತೀಕರಣ ಒಡ್ಡುವ ಸವಾಲುಗಳನ್ನು, ಅವಕಾಶಗಳಾಗಿ ಮಾರ್ಪಡಿಸಿ, ಕನ್ನಡ-ಕರ್ನಾಟಕ, ಸಮಾಜ-ಸಂಸ್ಕೃತಿಯ ಒಳಿತಿಗೆ ಶ್ರಮಿಸುತ್ತ, ಉತ್ತಮ ಸಾಹಿತ್ಯ-ಕಲೆಯ ಬಗ್ಗೆ ಎಚ್ಚರ ಮೂಡಿಸುತ್ತ, ಆರೋಗ್ಯ, ಶಿಕ್ಷಣ, ಪರಿಸರದ ಬಗ್ಗೆ ಕಾಳಜಿ ತೋರಿಸುತ್ತ, ಒಂದು ಮೌಲಿಕ ಸಮಾಜವನ್ನು ಕಟ್ಟುವೆಡೆಗಿನ ಅವಿರತದ ಕಾರ್ಯಕ್ರಮಗಳು ನಿಜಕ್ಕೂ ಭಿನ್ನ.  
ಕನ್ನಡ ನಾಡು-ನುಡಿ-ಸಂಸ್ಕೃತಿಯ ಬಗ್ಗೆ ಅಂತರಂಗದಲ್ಲಿನ ಅಭಿಮಾನವನ್ನು ಬಹಿರಂಗದಲ್ಲಿ ತರ್ಕಬದ್ದವಾಗಿ ಕಾರ್ಯರೂಪಕ್ಕೆ ತರುವುದರ ಮೂಲಕ ’ಅವಿರತ ತಂಡ’ವು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡು, ಸತತ ಐದು ವರ್ಷಗಳ ಕಾಲ ತನ್ನ ಕ್ರಿಯಾಶೀಲತೆಯನ್ನು ಉಳಿಸಿಕೊಂಡು, ತನ್ನ ಸುತ್ತಲಿನ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವುದು ಅಭಿನಂದನಾರ್ಹ.
ತಂತ್ರಜ್ಣಾನದ ಫಲವಾದ ಇಂಟರ್ನೆಟ್ಟಿನ ಮೂಲಕ ಪ್ರಾರಂಭವಾದ ಯಾನ ೫ ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸಿಕೊಂಡಿದ್ದು ’ನಮ್ಮ’ ಜಾನಪದ ಲೋಕದಲ್ಲಿ...

’ಅವಿರತ ತಂಡ’ದಲ್ಲಿನ ಮುಕ್ಕಾಲು ಭಾಗ ಸದಸ್ಯರು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದರೂ, ಇಂದಿನ ಕಾರ್ಪೋರೇಟ್  ರೀತಿಯ ಆಚರಣೆಯಲ್ಲಿ ವಿಶ್ವಾಸವಿಡದೆ, ಅದರ ಪ್ರಭಾವಕ್ಕೊಳಗಾಗದೆ, ೫ನೇ ವಾರ್ಷಿಕೋತ್ಸವದ ಕಾರ್ಯಕ್ರಮ, ಊಟೋಪಚಾರವೆಲ್ಲವನ್ನೂ ನಮ್ಮತನದ ಪರಿಚಯ ಮಾಡಿಕೊಡುವ ರಾಮನಗರದ ’ಜಾನಪದ ಲೋಕ’ದಲ್ಲಿ, ದೇಸಿ ರೀತಿಯಲ್ಲಿ ಆಯೋಜಿಸಿದ್ದು, ’ಅವಿರತ’ ತನ್ನದೇ ಆದ ಮಾದರಿಯನ್ನು ಮೈಗೂಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿತ್ತು.  ಅಲ್ಲದೇ, ’ಅವಿರತ’ದ ಧ್ಯೇಯೋದ್ದೇಶಗಳಿಗೆ, ಸಿದ್ದಾಂತ-ನಂಬಿಕೆಗಳಿಗೆ ಪೂರಕವೂ ಆಗಿತ್ತು.

ಎಷ್ಟೋ ಬಾರಿ ಅವಿರತದ ಸದಸ್ಯರು ತಮ್ಮ ಮನೆಯ ಕೆಲಸಗಳನ್ನು ಪಕ್ಕಕ್ಕಿಟ್ಟು, ’ಅವಿರತ’ದ ಕೆಲಸಕ್ಕೆ ಆದ್ಯತೆಕೊಟ್ಟು ತಮ್ಮ ತಮ್ಮ
ಮನೆಗಳಲ್ಲಿ ಎದುರಿಸಿರಬಹುದಾದ ಸಂದರ್ಭಗಳನ್ನು ’ಅವಿರತ’ದ ಅಧ್ಯಕ್ಷರು ಚೆನ್ನಾಗಿ ಅರಿತಿದ್ದರು.  ಹಾಗಾಗಿ, ತನ್ನ ೫ನೇ ವಾರ್ಷಿಕೋತ್ಸವವನ್ನು ಸಾರ್ವಜನಿಕ ಕಾರ್ಯಕ್ರಮವನ್ನಾಗಿಸದೆ, ಕೇವಲ ತನ್ನ ಸದಸ್ಯರ ಕುಟುಂಬ ವರ್ಗಕ್ಕೆ ಮೀಸಲು ಮಾಡಲಾಗಿತ್ತು.  ಹೀಗೆ ಮಾಡುವುದರ ಮೂಲಕ, ತನ್ನ ಸದಸ್ಯರ ಮನೆಯವರಿಗೂ, ಹಿರಿಯರಿಗೂ ’ಅವಿರತ’ದ ಬಗ್ಗೆ ಪರಿಚಯ ಮಾಡಿಕೊಟ್ಟು, ತನ್ನ ಸದಸ್ಯರುಗಳೆಲ್ಲಾ ಸಾಮಾಜಿಕ ಕಾರ್ಯಗಳಲ್ಲಿ ಸುಲಭವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಸತ್ಕಾರ್ಯಗಳಿಗೆ ಸದಸ್ಯರ ಮನೆಯವರೂ ಸಹ ಕೈಜೋಡಿಸುವಂತೆ ಪ್ರೋತ್ಸಾಹಿಸಿದ್ದು ನಿಜಕ್ಕೂ ವಿನೂತನ ಹಾಗೂ ಅತ್ಯವಶ್ಯಕವಾದ ಪ್ರಯತ್ನವಾಗಿತ್ತು.
ಮನೆ ಮಂದಿಯ ಕಾರ್ಯಕ್ರಮವಾದ್ದರಿಂದ ಯಾವುದೇ ಅತಿಥಿ, ಅಧ್ಯಕ್ಷ ಭಾಷಣಗಳಿಲ್ಲದೆ ಕಾರ್ಯಕ್ರಮ ಪ್ರಾರಂಭವಾಯಿತು.  ತನ್ನ ೫ ವರ್ಷದ ಪಯಣವನ್ನು ಮಕ್ಕಳ ಬೆಳವಣಿಗೆಗೆ ಹೋಲಿಸಿ, ಮಕ್ಕಳಿಂದಲೇ ಹಣತೆ ಬೆಳಗಿಸುವುದರ ಮೂಲಕ ’ಅವಿರತ’ ತನ್ನ ಪ್ರಬುದ್ದತೆಯನ್ನು ಮೆರೆಯಿತು. ಆ ನಂತರ ಒಂದಾದ ನಂತರ ಒಂದರಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಆಸ್ವಾದನೆಗೆ ಸಾಲುಗಟ್ಟಿ ನಿಂತವು.  ಬಿಸಿಲಲ್ಲಿ ದಣಿದು ಬಂದವರಿಗೆ ತಂಪು ನೀಡುವಷ್ಟು ಇಂಪಾಗಿದ್ದ ’ತೆರೆದಿದೆ ಮನೆ..ಓ ಬಾ ಅತಿಥಿ’ ಹಾಡಿನ ಗಾಯನ, ಎಲ್ಲರಲ್ಲೂ ಸಂಚಲನವುಂಟು ಮಾಡಿದ ’ಹಚ್ಚೇವು ಕನ್ನಡದ ದೀಪ’ ಸಮೂಹ ಗಾಯನ, ಚಿಣ್ಣರೆಲ್ಲಾ ಸೇರಿ ಮುದ್ದು ಮುದ್ದಾಗಿ  ಅಭಿನಯಿಸಿದ ’ಗೋವಿನ  ಹಾಡು’, ಏರುತ್ತಿದ್ದ ಬಿಸಿಲಿನ ತಾಪವನ್ನು ಮರೆಯುವಂತೆ ಮಾಡಿದ ಭರತನಾಟ್ಯ, ಕಥಕ್  ಪ್ರದರ್ಶನಗಳು,  ಬಿಸಿಲಲ್ಲೂ  ಉತ್ಸಾಹ ತುಂಬುವ ಪ್ರಯತ್ನ ಮಾಡಿದ ಹಳೆಯ ಚಿತ್ರಗೀತೆಗಳ ಸಮೂಹ ಗಾಯನ, ಮಲೆನಾಡನ್ನು ನೆನಪಿಸಿದ ’ಈ ಹಸಿರು ಸಿರಿಯಲಿ...’ ಹಾಡಿನ ಗಾಯನ; ಜನಪದ ಲೋಕದಲ್ಲಿ ಜನಪದರ ಪದ/ಪದ್ಯ ಪರಿಚಯ ಮಾಡಿಕೊಟ್ಟ ಜನಪದ ಗೀತೆಗಳ ಗಾಯನ;  ನಡುವೆ ಇಣುಕು ಹಾಕುತ್ತಿದ್ದ ರಸಪ್ರಶ್ನೆ ಹಾಗೂ ಮ್ಯಾಜಿಕ್ ಪ್ರದರ್ಶನ ನೆರೆದಿದ್ದವರು ಸಮಯ ಮರೆಯುವಂತೆ ಮಾಡಿತ್ತು.  
ಬಿಸಿಲಿನ ತಾಪ ಇಳಿಯುತ್ತಾ ಹೋದಂತೆ,  ಕಾರ್ಯಕ್ರಮದ ಕಾವು ಏರುತ್ತಾ ಹೋದದ್ದು ಪರಿಣಾಮಕಾರಿಯಾಗಿತ್ತು. 
’ಅವಿರತ’ದ ಬೆಳವಣಿಗೆಯನ್ನು ನಿರೂಪಿಸಿದ ವಿಡಿಯೋ ಪ್ರಾತ್ಯಕ್ಷಿಕೆಯು ’ಅವಿರತ’ ದ ಹಿಂದಿರುವ ಮಾರ್ಗದರ್ಶಕರನ್ನು, ಚಿಂತಕರನ್ನು ಪರಿಚಯಿಸಿತು.  ಈ ನಡುವೆ, ೫ ವರ್ಷಗಳ ಹಿಂದೆ ಈ ಸಮೂಹಕ್ಕೆ ’ಅವಿರತ’ ಎಂಬ ಹೆಸರನ್ನು ಸೂಚಿಸಿ, ನಾಮಕರಣ ಮಾಡಿದ ಕನ್ನಡಿಗ, ನಟ ಸುಚೇಂದ್ರ ಪ್ರಸಾದ್ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿ ’ಅವಿರತ’ದ ಬೆನ್ನು ತಟ್ಟಿದ್ದು ಕಾರ್ಯಕ್ರಮದ ಕಳೆ ಹೆಚ್ಚಿಸಿತು.  

ಗಣೇಶನ ಶ್ಲೋಕವೊಂದನ್ನು ಅದ್ಬುತವಾಗಿ ನಿರೂಪಿಸಿ ಅಚ್ಚರಿ ತಂದ ಸಮೂಹ ಭರತನಾಟ್ಯ ಪ್ರದರ್ಶನ, ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿದ ಕರ್ನಾಟಕದ ವಿವಿಧ ಪ್ರಾಂತ್ಯಗಳ ವಸ್ತ್ರವೈವಿಧ್ಯತೆಯನ್ನು ಪ್ರದರ್ಶಿಸಿದ ಫ್ಯಾಷನ್ ಶೋ,  ಆ ಕಾಲದವರು ಗುನುಗುವಂತೆ ಮಾಡಿದ ಯುಗಳ ಗೀತೆಗಳ ಗಾಯನ, ಈ ಕಾಲದವರು ಕುಣಿಯುವಂತೆ ಮಾಡಿದ  ಚಿತ್ರಗೀತೆಗಳ ನರ್ತನ, ಕಾರ್ಯಕ್ರಮಕ್ಕೆ ಶಾಸ್ತ್ರೀಯ ಸ್ಪರ್ಶಕೊಟ್ಟ ರವಿ ಮೂರೂರು ಹಾಗೂ ತ್ರಿಲೋಚನ್ರ ಜುಗಲ್ಬಂದಿ ಕಾರ್ಯಕ್ರಮ...ಇವೆಲ್ಲವೂ, ಹೊತ್ತು ಕಳೆದದ್ದೇ ತಿಳಿಯದಂತೆ ಮಾಡಿತ್ತು.
ದಿನದ ಕೊನೆಯ ಕಾರ್ಯಕ್ರಮವಾಗಿ ಬಂದ  ’ಶ್ರೀ ಕೃಷ್ಣ ಸಂಧಾನ’ ನಾಟಕವು ಹಾಸ್ಯದ ಹೊಳೆಯನ್ನೇ ಹರಿಸಿ, ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಲ್ಲದೆ, ಹೊತ್ತು ಮೀರಿದ್ದನ್ನೂ ಮರೆಸುವಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.    
ಅಲ್ಲಿಗೆ, ಸತತ ನಾಲ್ಕು ತಿಂಗಳುಗಳು ಕಾಲ ಪ್ರತಿ ವಾರಾಂತ್ಯದಲ್ಲಿ ಹಾಗೂ ಬಿಡುವಿನ ವೇಳೆಯಲ್ಲಿ, ಸುಮಾರು ೯ ವಿವಿಧ  ಜಾಗಗಳಲ್ಲಿ, ಸಮಯದ ಯೋಚನೆಯಿಲ್ಲದೆ ಅವಿರತ ಸದಸ್ಯರು ನಡೆಸಿದ ಸಿದ್ದತೆ, ಪಟ್ಟ ಶ್ರಮ ಯಶಸ್ವಿಯಾಗಿ  ಪ್ರೇಕ್ಷಕರನ್ನು ತಲುಪಿ ಸಾರ್ಥಕತೆಯನ್ನು ಕಂಡಿತ್ತು.
ಯಾವುದೇ ಒಂದು ಸಂಸ್ಥೆಯ ಅನುಭವ ವಿಸ್ತಾರವಾಗುತ್ತ ಹೋದಂತೆಲ್ಲಾ, ಆ ಸಂಸ್ಥೆಯ ಕಾರ್ಯಕ್ರಮಗಳ ವಿನ್ಯಾಸವೂ ವೈಚಾರಿಕವಾಗಿ ಅಭಿವೃದ್ದಿ ಹೊಂದುತ್ತಾ ಹೋಗುತ್ತದೆ.  ಈ ರೀತಿಯ ಬೆಳವಣಿಗೆಯನ್ನು ಪೋಷಿಸಲು, ಪೋಷಿಸಿ ಬೆಳೆಸಲು ಹಣಕಾಸಿನ ವ್ಯವಸ್ಥೆ, ಸಿದ್ದತೆ ಅತಿ ಮುಖ್ಯ.  ಈ ನಿಟ್ಟಿನಲ್ಲಿ, ತನ್ನ ೫ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ’ಅವಿರತ’ ತೆಗೆದುಕೊಂಡಿರುವ ಎರಡು ಪ್ರಮುಖ ನಿರ್ಧಾರಗಳು ನಿಜಕ್ಕೂ ಪ್ರಶಂಸಾರ್ಹ.  
ಒಂದು:  ’ಹೆಜ್ಜೆ-ಗೆಜ್ಜೆ’ ಕಾರ್ಯಕ್ರಮವು ’ಅವಿರತ’ದಲ್ಲಿನ ಪ್ರತಿಭೆಗಳ ಪ್ರದರ್ಶನಕ್ಕೆ ಅಥವಾ ಅನಾವರಣಕ್ಕಷ್ಟೇ ಮೀಸಲಾಗದೆ, ’ಅವಿರತ’ ತಂಡವು ಇನ್ನು ಮುಂದೆ ಸ್ವಾವಲಂಬಿಯಾಗುವ ಕಡೆಗಿನ ಒಂದು ಸಣ್ಣ ಪ್ರಯತ್ನವೂ ಆಗಿತ್ತು.  ಮುಂದಿನ ದಿನಗಳಲ್ಲಿ, ಯೋಜನೆಗಳಿಗಾಗಿ ಹಣ ಸಂಗ್ರಹಣೆಗೆ ’ಅವಿರತ’ದೊಳಗಿನ ಈ ಪ್ರತಿಭೆಗಳನ್ನೇ ಆಧಾರವಾಗಿಟ್ಟುಕೊಂಡು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಎರಡು :  ಕಾರ್ಪಸ್ ಫಂಡ್ ಸ್ಥಾಪಿಸುವುದರ ಮೂಲಕ ಆರ್ಥಿಕ ಬುನಾದಿಯನ್ನು ಸುಭದ್ರಗೊಳಿಸುವುದು.  

ಈ ಐದು ವರ್ಷಗಳ ಅವಧಿಯಲ್ಲಿ ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸಿ, ಯಶಸ್ವಿಯಾಗಿರುವ, ಹಿಂದುಳಿದ ಪ್ರದೇಶಗಳ ಅಗತ್ಯಗಳಿಗೆ ಸ್ಪಂದಿಸಿರುವ ಅವಿರತ ತಂಡದಲ್ಲಿ ನಾಡಿನ ಬಗ್ಗೆ, ಸಮುದಾಯದ ಬಗ್ಗೆ ಬೆಟ್ಟದಷ್ಟು ಕನಸುಗಳಿವೆ, ಯೋಜನೆಗಳಿವೆ.  
ಆ ಎಲ್ಲಾ ಯೋಜನೆಗಳು, ಕನಸುಗಳು ಸಾಕಾರವಾಗಲಿ, ಅವಿರತದ ವೈಚಾರಿಕತೆ, ಕಲಾತ್ಮಕತೆ ಹಾಗೂ ಕಾಳಜಿ ನಾಡಿಗಾಗಿ ನಿರಂತರವಾಗಲಿ....  

ಕಾರ್ಯಕ್ರಮಗಳ ಚಿತ್ರಗಳಿಗೆ ಕೆಳಗಿನ ಕೊಂಡಿಯನ್ನು ನೋಡಿ


No comments:

Post a Comment