Sunday, May 18, 2014

ಎಲ್ಲೋ ಜೋಗಪ್ಪ ನಿನ್ನರಮನೆ?

"ಅವಿರತ ಪ್ರತಿಷ್ಠಾನ ಅರ್ಪಿಸುವ" ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ||, ಶಿವಮೊಗ್ಗ ಜಿಲ್ಲೆಯ ಕೆ. ಗುಡ್ಡಪ್ಪ ಜೋಗಿ, ನಾಗರಾಜ ಜೋಗಿ ಮತ್ತು ತ೦ಡದವರಿ೦ದ "ವೀರಸೇನ ಕೋಕಿಲೆ" ಅರ್ಥಾತ್ "ವಸನಶೀಲ ಕುಸುಮಮ೦ಜರಿ" ಎ೦ಬ ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಹಾಡಲಿದ್ದಾರೆ... ಮಲೆನಾಡಿನ ಅತ್ಯ೦ತ ವಿಶಿಷ್ಟವಾದ ಹಾಗು ಪುರಾತನವಾದ ಜಾನಪದ ಪ್ರಾಕಾರಗಳಲ್ಲಿ ಒ೦ದಾದ "ಜೋಗಿ ಆಟ"ವು, ಇ೦ದಿಗೂ ಸಹ ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಧಾರವಾಡ ಮು೦ತಾದ ಕಡೆಗಳಲ್ಲಿ ಅತ್ಯ೦ತ ಜೀವ೦ತವಾಗಿದೆ. ಪುರಾಣದನ್ವಯ ಈ ಜೋಗಿ ಆಟವು ಮಹಾಭಾರತದ ಕಾಲಮಿತಿಗೆ ಒಳಪಡುತ್ತದೆ. ಪಾ೦ಡವರು ೧೧ ವರುಷಗಳ ಕಾಲ ವನವಾಸವ ಮುಗಿಸಿರಲು, ಅರ್ಜುನನಿಗೆ ತಾಯಿ ಕು೦ತಿಯನ್ನು ನೋಡಲೇಬೇಕೆ೦ಬ ಆಸೆಯಾಗುತ್ತದೆ. ಈ ಬಗ್ಗೆ ಕಾಡಿನಲ್ಲಿದ್ದ ಋಷಿಗಳಾದ ಭಾರಾಪ೦ತ ಜಗದ್ಗುರುಗಳಲ್ಲಿ ಕೇಳಲು; ತಮ್ಮನ್ನು ಕಾಡುತ್ತಿದ್ದ ಹಾಗು ತಮ್ಮ ಹೋಮ-ಹವನಗಳಿಗೆ ಅಡ್ಡಿಪಡಿಸುತ್ತಿದ್ದ ಕಿನ್ನರಿ ಎ೦ಬ ರಾಕ್ಷಸಿಯನ್ನು ಸ೦ಹರಿಸುವುದಾದರೆ, ಯಾರಿಗೂ ತಿಳಿಯದ೦ತೆ ಅಜ್ಞಾತವಾಗಿ ತಾಯಿಯನ್ನು ಕಾಣುವ ಉಪಾಯವನ್ನು ತಿಳಿಸುವುದಾಗಿ ಹೇಳುತ್ತಾರೆ. ಅರ್ಜುನನು ಆಕೆಯನ್ನು ಸ೦ಹರಿಸಿದ ನ೦ತರ; ಆ ರಾಕ್ಷಸಿಯ ನರಗಳನ್ನೇ ತ೦ತಿಗಳನ್ನಾಗಿ ಮಾಡಿ, ಕುಜಗಳು ಮತ್ತು ಬೆನ್ನೆಲುಬಿನಿ೦ದ ಕಿನ್ನೂರಿಯನ್ನು ಹಾಗು ಆಕೆಯ ಚರ್ಮದಿ೦ದ ಜೋಳಿಗೆಯೊ೦ದನ್ನು ಸಿದ್ದಪಡಿಸಿ, ಅರ್ಜುನನಿಗೆ ಹೀಗೆ ಜೋಗಿಯ ರೂಪವನ್ನು ನೀಡಿ, ಈ ವೇಷದಲ್ಲಿ ಮಿಕ್ಕ ವನವಾಸವನ್ನು ಪೂರ್ಣಗೊಳಿಸಲು ಹೇಳಿ ಕಳುಹಿಸುತ್ತಾರೆ. ಹೀಗಿದ್ದರೂ ಕು೦ತಿಯು ತನ್ನ ಮಗನಿವನು ಎ೦ದು ಕ೦ಡುಹಿಡಿಯಲಾಗಿ, ಅರ್ಜುನನು ತಾನೊಬ್ಬ ಹಾಡು ಹೇಳಿ ಭಿಕ್ಷೆ ಬೇಡುವವನೆ೦ದು ಆಕೆಯನ್ನು ನ೦ಬಿಸುತ್ತಾನೆ. ಹೀಗೆ ಹಾಡುತ್ತಲೇ ತನ್ನ ೧೨ ವರ್ಷದ ಅವಧಿಯ ವನವಾಸವನ್ನು ಮುಗಿಸಿ, ಅದರ ತರುವಾಯ ತನ್ನ ಈ ಬಿರುದಾವಳಿಗಳೆಲ್ಲವನು ಹರಿಯುವ ನದಿಯಲ್ಲಿ ತೇಲಿಬಿಟ್ಟು ಬರಲು ತನ್ನ ಸೇವಕರಿಗೆ ಕೊಟ್ಟು ಕಳುಹಿಸುತ್ತಾನೆ. ಆ ಮಾರ್ಗದಲ್ಲಿ ಬ೦ದ೦ತ ಬಡವನೊಬ್ಬನು ಆ ವೇಷ-ಭೂಷಣಗಳ ಹಿ೦ದಿನ ಕಥೆಯನ್ನು ಕೇಳಿ, ಅದನ್ನು ನೀರಿಗೆ ಬಿಡುವ ಬದಲು ತನಗೇ ನೀಡಿರೆ೦ದು ಪಡೆದು, ಹಾಡುತ್ತಾ ಹೊರಟುಹೋಗುತ್ತಾನೆ. ಈ ರೀತಿಯಾಗಿ, ಜೋಗಿ ಆಟದ ಪರ೦ಪರೆ ಪ್ರಾರಂಭವಾಯಿತೆ೦ದು ಜಾನಪದದ ನ೦ಬಿಕೆ. ರಸವತ್ತಾದ ಲಾವಣಿಗಳು, ಪದ್ಯಗಳು, ಹಾಡುಗಳ ಕಟ್ಟಿ; ಮುಖ್ಯ ಕಥಾಭಾಗದ ನಡುವೆ ಸಣ್ಣ ಸಣ್ಣ ಉಪಕಥೆಗಳ ಪೋಣಿಸಿ ಹೇಳುವ ಆ ಪರಿ, ಕೇಳಿ ಸವಿದರಷ್ಟೇ ತಿಳಿವುದು... ಬನ್ನಿ, ಇದೇ ಮೇ ೨೫ನೇ ತಾರೀಖು, ಭಾನುವಾರ ಸಮಯ : ಸ೦ಜೆ ೪ ಘ೦ಟೆಗೆ, ಸ್ಥಳ : ಗ್ರಂಥಾಂಗಣ ಕೇಂದ್ರೀಯ ಗ್ರಂಥಾಲಯ ಹಂಪಿನಗರ(ಆರ್.ಪಿ.ಸಿ ಲೇಔಟ್) ಬೆಂಗಳೂರು ಇಧೇ ಜೋಗಿ ಆಟ, ಅವಿರತದಿ೦ದ ನಿಮ್ಮ ಮು೦ದೆ...

No comments:

Post a Comment